ಹೊಸ ದಿಗಂತ ವರದಿ, ಚಿಕ್ಕಮಗಳೂರು:
ನಗರದ ಕೋಟೆ ಬಡಾವಣೆಯ ಮೂರುಮನೆ ಹಳ್ಳಿ ರಸ್ತೆಯಲ್ಲಿ ಸಾರ್ವಜನಿಕ ರಸ್ತೆಗೆ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ತಂತಿ ಬೇಲಿಯನ್ನು ನಗರಸಭೆ ಆಯುಕ್ತ ಬಸವರಾಜ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಬಳಿಕ ಮಾತನಾಡಿದ ಬಸವರಾಜ್, ಸಾರ್ವಜನಿಕರು ಓಡಾಡುವ ಕಾಲು ದಾರಿಗೆ ಬೇಲಿ ಹಾಕಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು ಹಲವು ಬಾರಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು ಸ್ಪಂದಿಸಿರಲಿಲ್ಲ ಇದೀಗ ಪೊಲೀಸ್ ಇಲಾಖೆ ಹಾಗೂ ನಗರಸಭೆ ಜಂಟಿಯಾಗಿ ತೆರವುಗೊಳಿಸುವ ಕಾರ್ಯ ಮಾಡಲಾಗಿದೆ ಎಂದು ಹೇಳಿದರು.
ನಗರಸಭೆ ವ್ಯಾಪ್ತಿಯ ಒಳಚರಂಡಿ, ವಿದ್ಯುತ್, ರಸ್ತೆ ಸೇರಿದಂತೆ ಇನ್ನಿತರ ಸಾರ್ವಜನಿಕ ಕೆಲಸಗಳಿಗೆ ಮೀಸಲಾದ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡುವುದು ಅಪರಾಧ. ಇಂತಹ ದೂರುಗಳು ಕೇಳಿಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಗುರುಪ್ರಸಾದ್, ನಗರಸಭೆ ಕಂದಯಾಧಿಕಾರಿ ಬಸವರಾಜ್, ಆರೋಗ್ಯ ಪರಿವೀಕ್ಷಕ ಈಶ್ವರಪ್ಪ, ಶಿವಾನಂದ್, ಜಗದೀಶ್, ಅಣ್ಣಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.