ಹೊಸದಿಗಂತ ಆನ್ ಲೈನ್ ಡೆಸ್ಕ್:
ನೈತಿಕತೆ ಇಲ್ಲದ ಸರ್ಕಾರ ಮಂಡಿಸಿದ ಬಜೆಟ್ ಕೇಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರು ಸಭಾತ್ಯಾಗ ಮಾಡಿದ್ದೆವು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಜೆಟ್ ಮಂಡನೆ ಬಳಿಕ ಆಯವ್ಯಯ ಪುಸ್ತಕ ನೋಡಿದೆ. ಅದು ಗೊತ್ತುಗುರಿಯಿಲ್ಲದ ಟೊಳ್ಳು ಬಜೆಟ್. ಸಿಎಂ ಯಡಿಯೂರಪ್ಪ ರಾಜ್ಯವನ್ನು 6 ವಲಯಗಳನ್ನಾಗಿ ಮಾಡಿದ್ದಾರೆ. ಹಿಂದೆ ಎಷ್ಟು ಖರ್ಚಾಗಿದೆ, ಮುಂದೆ ಎಷ್ಟು ಖರ್ಚಾಗುತ್ತೆ ಎಂಬ ಯಾವ ವಿಷಯದ ಬಗ್ಗೆಯೂ ಆಯವ್ಯಯದಲ್ಲಿ ಉಲ್ಲೇಖಿಸಿಲ್ಲ. ಬಿಚ್ಚಿಡುವುದಕ್ಕಿಂತ, ಬಚ್ಚಿಟ್ಟಿದ್ದೇ ಹೆಚ್ಚಾಗಿದೆ ಎಂದು ಟೀಕಿಸಿದ್ದಾರೆ.
ಕಳೆದ 5 ವರ್ಷಗಳಲ್ಲಿ ಆದಾಯ ಕೊರತೆಯಾಗಿಲ್ಲ. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಸಾಲದ ಮೊತ್ತ ಹೆಚ್ಚಾಗಿದೆ. 19,485.84 ಕೋಟಿ ಕಂದಾಯ ಕೊರತೆಯಾಗಿದೆ. ಪ್ರಸಕ್ತ ವರ್ಷ ರಾಜ್ಯದ ಸಾಲದ ಮೊತ್ತ 3,97,680 ಕೋಟಿ ಎಂದು ಹೇಳಿದರು.