ವಿದೇಶಗಳಲ್ಲಿ ಕ್ರಾಂತಿಯ ಕಿಡಿಹಚ್ಚಿ ಬ್ರಿಟೀಷರನ್ನು ನಡುಗಿಸಿದ್ದ ಕರ್ತಾರ್ ಸಿಂಗ್ ಎಂಬ ಕ್ರಾಂತಿಸಿಂಹ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಶೇರ್ ಸಿಂಗ್ ಎಂದೇ ಜನಜನಿತರಾದ ಕರ್ತಾರ್ ಸಿಂಗ್ ನವಾ ಚಾಂದ್‌ (1888-1944) ಪಂಜಾಬ್‌ನ ಮೋಗಾ ಜಿಲ್ಲೆಯ ನವಾ ಚಂದ್ ಗ್ರಾಮದ ಒಬ್ಬ ಕಟ್ಟಾ ಗದರ್‌ವಾದಿ ಕ್ರಾಂತಿಕಾರಿ.
ಇಪ್ಪತ್ತನೇ ಶತಮಾನದ ಆರಂಭದಲ್ಲಿ ಉತ್ತಮ ಉದ್ಯೋಗಾವಕಾಶಗಳ ಹುಡುಕಾಟದಲ್ಲಿ ಅನೇಕ ಪಂಜಾಬಿಗಳು ವಿದೇಶಗಳಿಗೆ ವಲಸೆ ಹೋದರು. ಹಾಗೆ ಹೋದವರಲ್ಲಿ ಕರ್ತಾರ್ ಸಿಂಗ್ ಸಹ ಒಬ್ಬರು. 1907 ರ ಜುಲೈನಲ್ಲಿ ಕರ್ತಾರ್ ಕೆನಡಾದ ವ್ಯಾಂಕೋವರ್‌ಗೆ ಪ್ರಯಾಣಿಸಿ ಮರಮಟ್ಟು ತಯಾರಿಕಾ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಲಾರಂಭಿಸಿದರು. ಬಿಳಿಯರ ಪೂರ್ವಾಗ್ರಹಪೀಡಿತ ಆಲೋಚನೆಗಳು, ಏಷ್ಯನ್ ವಿರೋಧಿ ಭಾವನೆ, ಮತ್ತು ಭಾರತೀಯ ವಲಸಿಗರನ್ನು ತುಚ್ಛವಾಗಿ ಕಾಣುವ ಮನಸ್ಥಿಗಳಿಂದ ಕರ್ತಾರ್‌ ಸಿಂಗ್‌ ನಾನಾ ತೊಂದರೆ ಅನುಭವಿಸಬೇಕಾಯಿತು. ಇವುಗಳ ವಿರುದ್ಧ ಸಿಡಿದೆದ್ದ ಕರ್ತಾರ್ ಸಿಂಗ್ ರಾಷ್ಟ್ರೀಯತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಧ್ವನಿ ಎತ್ತಿದರು. 1908 ರಲ್ಲಿ ಹೊಂಡುರಾಸ್ ನಲ್ಲಿ ವಲಸೆಗಾರರ ಗಡಿಪಾರನ್ನು ವಿರೋಧಿಸಿ ಹೋರಾಟಕ್ಕಿಳಿದರು. ಬ್ರಿಟಿಷ್ ಆಳ್ವಿಕೆಯನ್ನು ಉರುಳಿಸಲು ಭಾರತಕ್ಕೆ ಮರಳಲು ಸಮುದಾಯದ ಸದಸ್ಯರನ್ನು ಒತ್ತಾಯಿಸಿದರು.
ಏಪ್ರಿಲ್ 1913 ರಲ್ಲಿ ಗದರ್ ಪಕ್ಷ ಸ್ಥಾಪನೆಯಾದಾಗ ಅದಕ್ಕೆ ಸೇರ್ಪಡೆಯಾದರು. ಗದಾರ್‌ ಚಟುವಟಿಕೆಗಳಿಗೆ ಹಣ ಸಂಗ್ರಹಿಸಿದರು. ಬ್ರಿಟಿಷರಿಗೆ ನಿಷ್ಠಾವಂತರಾಗಿದ್ದವರ ಹತ್ಯೆಗಳಿಗೆ ಯೋಜನೆ ರೂಪಿಸಿದರು. ವ್ಯಾಂಕೋವರ್ ಗುರುದ್ವಾರದಲ್ಲಿ ಸರ್ಕಾರ ವಿರೋಧಿ ಭಾಷಣಗಳನ್ನು ಮಾಡಿದರು. ಬ್ರಿಟೀಷರ ವಿರುದ್ಧ ‘ಗೋರ್ಹ್ ಶಾಹಿ ಜುಲುಮ್’ ಎಂಬ ಕರಪತ್ರವನ್ನು ತಯಾರಿಸಲು ಶಾಮ್ ಸಿಂಗ್ ಗೆ ಸಹಕಾರ ನೀಡಿದರು.
ಮೇ 1913 ರಲ್ಲಿ ಕೊಮಗಟಾ ಮಾರು ಹಡಗು ವ್ಯಾಂಕೋವರ್‌ಗೆ ಆಗಮಿಸಿತು. ಕೆನಡಾ ಸರ್ಕಾರ ಯಾವುದೇ ಭಾರತೀಯರಿಗೆ ಇಳಿಯಲು ಅವಕಾಶ ನೀಡಲಿಲ್ಲ. ಪ್ರಯಾಣಿಕರಿಗೆ ಅವರ ಕಾನೂನು ಹೋರಾಟದಲ್ಲಿ ಸಹಾಯ ಮಾಡಲು ಕೆನಡಾದ ಸಿಖ್ಖರ ತೀರಾ ಸಮಿತಿಯೊಂದನ್ನು ರಚಿಸಲಾಯಿತು. ಕರ್ತಾರ್ ಸಿಂಗ್ ಸಮಿತಿಯ 15 ಸದಸ್ಯರಲ್ಲಿ ಒಬ್ಬರಾಗಿದ್ದರು. 1913ರ ಮೇ 31ರಂದು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ಕೆನಡಾದಲ್ಲಿ ಭಾರತೀಯರಿಗೆ ವಾಸಿಸುವ ಹಕ್ಕನ್ನು ಬ್ರಿಟಿಷ್ ಸರ್ಕಾರ ನಿರಾಕರಿಸುತ್ತಿದೆ ಮತ್ತು ನಾವು ಭಾರತಕ್ಕೆ ಹಿಂತಿರುಗಿ ಅಲ್ಲಿನ ಬ್ರಿಟಿಷ್ ಆಡಳಿತವನ್ನು ಕಿತ್ತೊಗೆಯೋಣ ಎಂಬ ಘೋಷಣೆಯನ್ನು ಮೊಳಗಿಸಿದರು. 1914 ರಲ್ಲಿ ಪ್ರಥಮ ಮಹಾಯುದ್ಧ ಪ್ರಾರಂಭವಾದಾಗ “ದುಷ್ಮನ್ ಕಿ ಖೋಜ್ ಭಾಲ್ʼ ಎಂಬ ಕರಪತ್ರವನ್ನು ಹೊರಡಿಸಿದರು. ಯುದ್ಧದ ಅವಕಾಶವನ್ನು ಬಳಸಿಕೊಂಡು ಸ್ವಾತಂತ್ರ್ಯ ಗಳಿಸಿಕೊಳ್ಳುವ ರೂಪುರೇಷೆಗಳನ್ನು ಇದು ಒಳಗೊಂಡಿತ್ತು.
ಅಕ್ಟೋಬರ್ 21 ರಂದು ಮೇವಾ ಸಿಂಗ್ ಬ್ರಿಟೀಷ್‌ ಅಧಿಕಾರಿ ವಿಲಿಯಂ ಹಾಪ್‌ಕಿನ್‌ಸನ್‌ನನ್ನು ಹತ್ಯೆಗೈದ. ಆದರೆ ಈ ಕೊಲೆ ಆರೋಪ ಕರ್ತಾರ್ ಸಿಂಗ್‌ ಗೆ ಸುತ್ತಿಕೊಂಡಿತು. ಆದರೆ ಕರ್ತಾರ್ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಸಿಗದ ಕಾರಣ ನಂತರ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯ ನಂತರ ಕರ್ತಾರ್‌ ದಂಗೆ ಪ್ರಚೋದಿಸುವ ಗುರಿಯೊಂದಿಗೆ ಭಾರತಕ್ಕೆ ವಾಪಸ್ಸಾದರು. ಆದರೆ, 1915 ರ ಮಾರ್ಚ್ 25 ರಂದು ಕರ್ತಾರ್‌ ರನ್ನು ಎರಡನೇ ಲಾಹೋರ್ ಪಿತೂರಿ ಪ್ರಕರಣದಲ್ಲಿ ಪಂಜಾಬ್‌ ನ ಲುಧಿಯಾನಾದಲ್ಲಿ ಬಂಧಿಸಲಾಯಿತು. ವ್ಯಾಂಕೋವರ್‌, ಸ್ಯಾನ್ ಫ್ರಾನ್ಸಿಸ್ಕೋ, ಹೊನೊಲುಲುನಲ್ಲಿ ಬ್ರಿಟೀಷ್‌ ಆಡಳಿತದ ವಿರುದ್ಧ ದಂಗೆಗಳನ್ನು ಪ್ರಚೋದಿಸಿದ ಆರೋಪ ಹೊರಿಸಲಾಯಿತು. ಈ ಸಂಬಂಧ ಕರ್ತಾರ್‌ ಸಿಂಗ್‌ ಗೆ ಮರಣದಂಡನೆ ವಿಧಿಸಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಬಳಿಕ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಯಿತು. ಕರ್ತಾರ್‌ ಸಿಂಗ್ ಇಪ್ಪತ್ತು ವರ್ಷಗಳ ಕಾಲ‌ ದೇಶದ ವಿವಿಧ ಜೈಲುಗಳಲ್ಲಿ ಕಳೆದು 1934 ರಲ್ಲಿ ಬಿಡುಗಡೆಯಾದರು. ಬಿಡುಗಡೆಯ ನಂತರ ಕರ್ತಾರ್ ಆಧ್ಯಾತ್ಮಿಕತೆಯ ಬಗ್ಗೆ ಒಲವು ಬೆಳೆಸಿಕೊಂಡರು. ಧಾರ್ಮಿಕ ತತ್ತ್ವಶಾಸ್ತ್ರದ ಬಗ್ಗೆ ಮೂರು ಪುಸ್ತಕಗಳನ್ನು ಬರೆದರು. 1944 ರ ಏಪ್ರಿಲ್ 4 ರಂದು ತಮ್ಮ ಹೊಸ ಪುಸ್ತಕಕ್ಕಾಗಿ ವಿಷಯ ಸಂಗ್ರಹಿಸುವಾಗಲೇ ಅನಿರೀಕ್ಷಿತವಾಗಿ ಮರಣ ಹೊಂದಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!