ಟಿಪ್ಪುವಿನ ಇನ್ನೊಂದು ಮುಖದ ಅನಾವರಣ ಅನಿವಾರ್ಯ: ಸಿ.ಟಿ. ರವಿ

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಧಾರವಾಡ: ಟಿಪ್ಪು ಸುಲ್ತಾನ್ ಒಬ್ಬನೆ ಅಲ್ಲ ಗಝನಿ, ಘೋರಿ, ಲೋಧಿ, ಖಿಲ್ಜಿ ಆದಿಯಾಗಿ ಅವರೆಲ್ಲ ಸಂತತಿಯು ಹಿಂದೂ ಸಂಸ್ಕೃತಿ ನಾಶಕ್ಕೆ ಮುಂದಾಗಿದ್ದರು. ಸಮಾಜ ಜಾಗೃತಿಗಾಗಿ ಟಿಪ್ಪುವಿನ ಇನ್ನೊಂದು ಮುಖವನ್ನು ಅನಾವರಣಗೊಳಿಸಲಾಗಿದೆ ಎಂದು ಭಾಜಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಪ್ರಜ್ಞಾ ಪ್ರವಾಹ ಆಯೋಜಿಸಿದ್ದ ಟಿಪ್ಪು ನಿಜ ಕನಸುಗಳು ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಟಿಪ್ಪುವಿಗೆ ರಾಜನಾಗುವ ಯೋಗ್ಯತೆಯೆ ಇರಲಿಲ್ಲ.‌ಆತ ಮೂಲತಃ ಕ್ರೂರಿ. ಕನ್ನಡ ಭಾಷೆಯನ್ನು ಕಡೆಗಣಿಸಿದವನು. ಅನೇಕ ಕನ್ನಡದ, ಊರುಗಳ‌ ಹೆಸರನ್ನು ಪರ್ಷಿಯಾಗಿ ಬದಲಿಸಿದವ. ಹೀಗಿದ್ದರೂ ಅವನನ್ನು ಜಾತ್ಯಾತೀತ, ಕನ್ನಡ ಪ್ರೇಮಿ ಎಂದು ಬಣ್ಣಿಸಲಾಗಿತ್ತು. ಮತಗಳ ಆಸೆಗೋಸ್ಕರ ಅವನ ವೈಭವಿಕರಣ ನಡೆಯಿತು ಎಂದರು.

ಈ ಕೃತಿಯ ಮೂಲಕ ವಾಸ್ತವಿಕತೆಯ ವಿಶ್ಲೇಷಣೆಯಾಗಬೇಕು. ಈ‌ ಕೃತಿ ಕೇವಲ‌ ಟಿಪ್ಪುವಿನ ಬಗ್ಗೆ ಮಾತ್ರ ಅಲ್ಲ ಜೊತೆಗೆ ಹಿಂದೂ ಸಮಾಜದ ಕರ್ತವ್ಯವನ್ನು ತಿಳಿಸುತ್ತದೆ. ನೈಜತೆಯ ಜಾಗೃತಿ ಎಲ್ಲರಿಂದಲೂ ಆಗಬೇಕು ಎಂದು ಹೇಳಿದರು.

ಪುಸ್ತಕದ ಲೇಖಕ ಹಾಗೂ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಈ ಹಿಂದೆ ಡಾ. ಗಿರೀಶ ಕಾರ್ನಾಡ ರಚಿಸಿದ ಟಿಪ್ಪು ಕಂಡ‌ ಕನಸುಗಳು ಕೃತಿಯಲ್ಲಿ ಅನೇಕ ಸುಳ್ಳು ವಿಚಾರ ಬಿಂಬಿಸಲಾಗಿತ್ತು. ತದನಂತರ ಸಿದ್ದರಾಮಯ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ, ಕಾಂಗ್ರೆಸ್ ನ ಮುಸ್ಲಿಂ ತುಷ್ಟೀಕರಣದ ಪರಿಣಾಮ ಟಿಪ್ಪು ಸುಲ್ತಾನನನ್ನು ಪಠ್ಯದಲ್ಲಿ ಹಾಗೂ ನಾಡಿನಲ್ಲಿ ಸ್ವಾತಂತ್ರ್ಯ ಸೇನಾನಿ, ನಾಯಕ ಎಂಬಂತೆ ವೈಭವಿಕರಿಸಲಾಗಿತ್ತು. ಆದರೆ ಟಿಪ್ಪು ನಿಜವಾಗಿಯೂ ಒಬ್ಬ ಮತಾಂಧ, ಸಾಕಷ್ಟು ಹಿಂದೂ ಹತ್ಯಾಕಾಂಡಗಳ ರೂವಾರಿಯಾಗಿದ್ದ. ಹಿಂದೂ ಸಂಸ್ಕೃತಿಯ ನಾಶಕ್ಕೆ ಪ್ರಯತ್ನಿಸಿದ್ದ. ಇಂಥವನ ನಿಜ ಸ್ವರೂಪ ಜನತೆಗೆ ತಿಳಿಸುವುದು ಅನಿವಾರ್ಯವಾಗಿತ್ತು.‌ ಇಷ್ಟೆಲ್ಲದರ ಪರಿಣಾಮ ಈ ಕೃತಿ, ನಾಟಕ ಸೃಷ್ಟಿಯಾಯಿತು. ಟಿಪ್ಪುವಿನ ಇನ್ನೊಂದು ಮುಖವನ್ನು ಈ ಕೃತಿಯಲ್ಲಿ ಕಾಣಬಹುದು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!