ಕೆಂಪೇಗೌಡರ ಪ್ರತಿಮೆ ಅನಾವರಣ: ಹಂಪಿಯ ಪವಿತ್ರ ಮೃತ್ತಿಕೆ ಸಂಗ್ರಹಿಸಿದ ಸಚಿವರು!

ಹೊಸದಿಗಂತ ವರದಿ,ವಿಜಯನಗರ:

ನಾಡಪ್ರಭು ಕೆಂಪೇಗೌಡ ಅವರ 158 ಅಡಿ ಕಂಚಿನ ಭವ್ಯ ಪ್ರತಿಮೆ ಅನಾವರಣ ಹಿನ್ನೆಲೆ ಕಂದಾಯ ಸಚಿವ ಆರ್.ಅಶೋಕ್, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಆಶ್ವಥ್ ನಾರಾಯಣ್, ಗೃಹಸಚಿವ ಅರಗ ಜ್ಞಾನೇಂದ್ರ, ಕ್ರೀಡಾಸಚಿವ ನಾರಾಯಣಗೌಡ ಅವರು, ಶುಕ್ರವಾರ ವಿಶ್ವ ಪ್ರಸಿದ್ಧ ಹಂಪಿಯ ಶ್ರೀ ವಿರೂಪಾಕ್ಷ ದೇಗುಲಕ್ಕೆ ಭೇಟಿ ನೀಡಿ ಪವಿತ್ರ ಮೃತ್ತಿಕೆ ಸಂಗ್ರಹಿಸಿದರು.

ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹೆಲಿಪ್ಯಾಡ್‍ನಲ್ಲಿ ಬಂದಿಳಿದ ಸಚಿದ್ವಯರನ್ನು, ಹಂಪಿ ವರೆಗೆ ಬೈಕ್ ಜಾಥಾ ಮೂಲಕ ಕರೆತರಲಾಯಿತು. ವಿವಿಧ ಕಲಾ ತಂಡಗಳಾದ ಡೊಳ್ಳು ಕುಣಿತ, ನಂದಿಕೋಲು, ತಮಟೆ ವಾದನ, ಗೊಂಬೆ ಕುಣಿತ ಸೇರಿದಂತೆ ಜಾನಪದ ಕಲಾವಿದರೊಂದಿಗೆ ಸಚಿವರು ವಿರೂಪಾಕ್ಷ ದೇಗುಲದವರೆಗೆ ಹೆಜ್ಜೆ ಹಾಕಿದರು.

ವಿರೂಪಾಕ್ಷೇಶ್ವರ ದೇವಸ್ಥಾನ ಆವರಣಕ್ಕೆ ತೆರಳುತ್ತಿದ್ದಂತೆ ಶ್ರೀಮಠದ ಆನೆ ಲಕ್ಷ್ಮೀ ನಾಲ್ವರು ಸಚಿವರಿಗೆ ಹೂವಿನಹಾರ ಹಾಕಿ ಸನ್ಮಾನಿಸಿತು.
ಸಚಿವರು ಹಂಪಿ ವಿರೂಪಾಕ್ಷೇಶ್ವರ, ತಾಯಿ ಪಂಪಾಂಬಿಕೆ ಹಾಗೂ ನಾಡದೇವತೆ ಭುವನೇಶ್ವರಿಯ ಪೂಜೆ ನೆರವೇರಿಸಿದರು. ನಂತರ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದ ಮಂಟಪದಲ್ಲಿ ಹಂಪಿ ಪುಷ್ಕರಣೆಗಳಿಂದ 9 ತಾಮ್ರದ ಬಿಂದಿಗೆಗಳಲ್ಲಿ ಸಂಗ್ರಹಿಸಿದ ಪವಿತ್ರ ಮೃತ್ತಿಕೆಗೆ ವಿಶೇಷ ಪೂಜೆ ನೆರವೇರಿಸಿದರು. ನಂತರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಪವಿತ್ರ ಮೃತ್ತಿಕೆಗಳ ಬಿಂದಿಗೆಗಳನ್ನು ನಾಲ್ವರು ಸಚಿವರಿಗೆ ನೀಡಿದರು.

ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಆಶ್ವಥ್ ನಾರಾಯಣ್ ಅವರು ಮಾತನಾಡಿ, ನಾಡಪ್ರಭು ಕೆಂಪೇಗೌಡರ ಭವ್ಯ ಕಂಚಿನ ಪ್ರತಿಮೆ ಅನಾವರಣ ಹಿನ್ನೆಲೆ ವಿಜಯನಗರ ಹಂಪಿಯ ಪವಿತ್ರ ಮೃತ್ತಿಕೆ, ಬಸವಣ್ಣನವರ ಜನ್ಮಸ್ಥಳದ ಮೃತ್ತಿಕೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಸಮಾಧಿಯ ಮೃತ್ತಿಕೆಯನ್ನು ಪಡೆಯಲಾಗುವುದು ಎಂದರು. ವಿಜಯನಗರ ಸಾಮಾಜ್ರಕ್ಕೂ ಬೆಂಗಳೂರಿಗೆ ಭಾವನಾತ್ಮಕ ಸಂಬಂಧವಿದ್ದು, ಹಂಪಿಯ ಪವಿತ್ರ ಮೃತ್ತಿಕೆಯಿಂದ ಈ ಭಾವನಾತ್ಮಕ ಸಂಬಂಧ ವೃದ್ಧಿಸಲು ಸಾಧ್ಯವಾಗಲಿದೆ ಎಂದರು.

ಕಂದಾಯ ಸಚಿವ ಆರ್.ಅಶೋಕ ಮತ್ತು ಗೃಹಸಚಿವ ಅರಗ ಜ್ಞಾನೇಂದ್ರ ಅವರು ಮಾತನಾಡಿದರು. ನಂತರ ಹಂಪಿಯಿಂದ ಕೂಡಲಸಂಗಮಕ್ಕೆ ಸಚಿವರು ತೆರಳಿದರು. ಈ ಸಂದರ್ಭದಲ್ಲಿ ಕ್ರೀಡಾ ಸಚಿವ ನಾರಾಯಣಗೌಡ, ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ, ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ತಹಶೀಲ್ದಾರ್ ವಿಶ್ವಜೀತ್ ಮೆಹತಾ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಸೇರಿದಂತೆ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!