ಬಸವ ಕಲ್ಯಾಣದಲ್ಲಿ ಏ.9ಕ್ಕೆ ವಿವಿಧ ಯೋಜನೆಗಳ ಅನಾವರಣ; ಸಿಎಂ ಬೊಮ್ಮಾಯಿ, ಬಿಎಸ್‌ವೈ ಆಗಮನ

ಹೊಸದಿಗಂತ ವರದಿ, ಬಸವಕಲ್ಯಾಣ
ಬಸವಕಲ್ಯಾಣ ಕ್ಷೇತ್ರ ಸಮಿತಿ ಬಸವಕಲ್ಯಾಣ, ವಿಕಾಸ ಅಕಾಡೆಮಿ ಕಲಬುರಗಿ ಅವರ ಸಂಯುಕ್ತಾಶ್ರಯದಲ್ಲಿ ಬಸವಕಲ್ಯಾಣವನ್ನು ಸುಂದರ ಸಾಂಸ್ಕೃತಿಕ ನಗರವನ್ನಾಗಿಸಲು ವಿವಿಧ ಯೋಜನೆಗಳ ಅನಾವರಣ ಹಾಗೂ ಬಸವಕಲ್ಯಾಣ- ಕಲ್ಯಾಣ ಕರ್ನಾಟಕ ಯಾತ್ರಾ ಪರ್ವ (ಐದು ವರ್ಷದ ಯೋಜನೆ) ಕಾರ್ಯಕ್ರಮವನ್ನು ಏ.9ರಂದು ಬೆಳಿಗ್ಗೆ 11 ಗಂಟೆಗೆ ನಗರದ ರಥ ಮೈದಾನದಲ್ಲಿ ಆಯೋಜಿಸಲಾಗಿದೆ.
ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಪುತ್ಥಳಿ ಅನಾವರಣ, ತಾಪಂನ ನೂತನ ಕಚೇರಿ ಹಾಗೂ ಹುಲಸೂರ ನೂತನ ಪೊಲೀಸ್ ಕಚೇರಿಯ ಉದ್ಘಾಟನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಕೇಂದ್ರದ ಸಚಿವರು, ರಾಜ್ಯದ ವಿವಿಧ ಇಲಾಖೆಗಳ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಹಿನ್ನಲೆಯಲ್ಲಿ ಬುಧವಾರ ಜಿಲ್ಲಾಡಳಿತದಿಂದ ಸ್ಥಳ ಪರಿಶೀಲಿಸಲಾಯಿತು.
ನಗರದ ರಥ ಮೈದಾನದಲ್ಲಿ ಜರುಗುವ ಕಾರ್ಯಕ್ರಮದ ನಿಮಿತ್ಯ ಸ್ಥಳಕ್ಕೆ ಆಗಮಿಸಿದ ಶಾಸಕ ಶರಣು ಸಲಗರ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ ಬಾಬು, ಸಹಾಯಕ ಆಯುಕ್ತ ರಮೇಶ ಕೋಲಾರ್, ಹುಮನಾಬಾದ ಡಿವೈಎಸ್‍ಪಿ ಸೋಮಲಿಂಗ ಕುಂಬಾರ, ತಹಸೀಲ್ದಾರ ಸಾವಿತ್ರಿ ಶರಣು ಸಲಗರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಪರಿಶೀಲಿಸಿದರು.
ಜೊತೆಗೆ ನಗರದ ಹೃದಯ ಭಾಗದಲ್ಲಿರುವ ಅಂಬೇಡ್ಕರ ವೃತ್ತದಲ್ಲಿ ಅಂಬೇಡ್ಕರ ಮೂರ್ತಿ ಅನಾವರಣ ಕಾರ್ಯಕ್ರಮವೂ ಸಹ ಅಂದೇ ಜರುಗಲಿರುವ ಹಿನ್ನಲೆಯಲ್ಲಿ ಈ ಸ್ಥಳದಲ್ಲಿಯೂ ಸಹ ಶಾಸಕ ಶರಣು ಸಲಗರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೆಲ ನಿಮಿಷಗಳ ಕಾಲ ಚರ್ಚೆಯಲ್ಲಿ ತೊಡಗುವ ಮೂಲಕ ಪರಿಶೀಲನೆ ನಡೆಸಿದರು.
ಒಟ್ಟಾರೆಯಾಗಿ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಆಗಮನದ ಹಿನ್ನಲೆಯಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಜಿಲ್ಲಾಡಳಿತ ಸಕಲ ವ್ಯವಸ್ಥೆ ಕೈಗೊಳ್ಳುತ್ತಿದೆ. ಜೊತೆಗೆ ರಥ ಮೈದಾನದಲ್ಲಿ ಜರುಗಲಿರುವ ಕಾರ್ಯಕ್ರಮದ ಪ್ರಯುಕ್ತ ಈಗಾಗಲೇ ಬೃಹತ್ ಪ್ರಮಾಣದಲ್ಲಿ ಪೆಂಡಾಲ್ ಹೊಡೆಯಲಾಗುತ್ತಿದೆ. ಜೊತೆಗೆ ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಪಾರ್ಕಿಂಗ ವ್ಯವಸ್ಥೆಗೆ ನಿರ್ಧರಿಸಲಾಯಿತು ಹಾಗೂ ಪ್ರಸಾದಕ್ಕೂ ಸಹ ಕಾರ್ಯಕ್ರಮದ ವೇದಿಕೆಯ ಪಕ್ಕದಲ್ಲಿ ಪ್ರತ್ಯೇಕ ಸ್ಥಳ ನಿಗದಿ ಮಾಡುವ ಮೂಲಕ ಕಾರ್ಯಕ್ರಮ ಸುಸೂತ್ರವಾಗಿ ಜರುಗಬೇಕು ಎಂದು ನಿರ್ಧರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಕಾರ್ಯಕ್ರಮದ ಸದುಪಯೋಗ ಪಡೆದು ಯಶಸ್ವಿಗೊಳಿಸಬೇಕು ಎಂದು ಬಸವಕಲ್ಯಾಣ ಕ್ಷೇತ್ರ ಸಮಿತಿಯ ಪರವಾಗಿ ಬಸವರಾಜ ಪಾಟೀಲ ಸೇಡಂ ಅವರು ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!