ʼಉಪನಯನ ಸಂವಿಧಾನ ವಿರೋಧಿ, ಬ್ರಾಹ್ಮಣರೆಂದು ಗುರುತಿಸಿಕೊಳ್ಳುವವರಿಗೆ ಜೈಲು ಶಿಕ್ಷೆʼ – ತಥಾಕಥಿತ ಉದಾರವಾದಿಗಳ ವಾದವಿದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಜನಿವಾರ ಹಾಕಿಕೊಳ್ಳೋದು ಸಂವಿಧಾನ ವಿರೋಧಿ, ಉಪನಯನವು ಸಂವಿಧಾನದ 15 ಮತ್ತು 17 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಮತ್ತು ಅದನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಬೇಕು. ಯಾರಾದರೂ ಬ್ರಾಹ್ಮಣ ಎಂದು ಗುರುತಿಸಿಕೊಂಡರೆ ಅವರಿಗೆ ಶಿಕ್ಷೆ ನೀಡಬೇಕು.ʼ…ಮಗನ ಉಪನಯನ ಸಂಸ್ಕಾರದ ಫೋಟೋವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡ ತಾಯಿಗೆ ಸಿಕ್ಕ ಸಂದೇಶ ಇದು.

ರೂಪಾ ಮೂರ್ತಿ ಎನ್ನುವವರು ಏಪ್ರಿಲ್‌ 25 ರಂದು ಒಂದು ವರ್ಷದ ಹಿಂದೆ ತಮ್ಮ ಮಗನಿಗೆ ಉಪನಯನ ಸಂಸ್ಕಾರ ನೀಡಿದ ಸಂದರ್ಭದ ಫೋಟೋವೊಂದನ್ನು ಟ್ವೀಟರ್‌ ನಲ್ಲಿ ಹಂಚಿಕೊಂಡಿದ್ದರು. ಉಪನಯನ ಸಂಸ್ಕಾರದಲ್ಲಿ ಮಾತೃಭೋಜನ ಸಂದರ್ಭದ ಚಿತ್ರವೂ ಇದರಲ್ಲಿತ್ತು. ಆಕೆ ಫೋಟೋ ಹಂಚಿಕೊಳ್ಳುತ್ತಿದ್ದಂತೆಯೇ ಒಂದಿಷ್ಟು ಮಂದಿ ತಥಾಕಥಿತ ಬುದ್ಧಿ ಜೀವಿಗಳು, ತಮ್ಮನ್ನು ತಾವು ಅಂಬೇಡ್ಕರರು ಬರೆದ ಸಂವಿಧಾನದ ಪಾಲಕರು ಎಂದು ಕರೆದುಕೊಳ್ಳುವ ಕೆಲವರು ಈ ಫೋಟೋವನ್ನು ಹಂಚಿಕೊಂಡಿದ್ದಕ್ಕೆ ವೈಯುಕ್ತಿಕವಾಗಿ ಟೀಕಿಸಿದ್ದಲ್ಲದೇ ಧಾರ್ಮಿಕ ನಿಂದೆಯನ್ನೂ ಮಾಡಿದ್ದಾರೆ.

ಲೇಖಕ ಮತ್ತು ಎಡಿಟರ್ಸ್‌ ಗಿಲ್ಡ್‌ ಸದಸ್ಯ ದಿಲೀಪ್ ಮಂಡಲ್ ಎನ್ನುವವರು “ಇದೇನು? ಹಿಂದೂ ಕುಟುಂಬಗಳಲ್ಲಿ ನಾವು ಈ ಕೆಲಸಗಳನ್ನು ಮಾಡುವುದಿಲ್ಲ. ಅಲ್ಲದೆ, ಆ ಹುಡುಗ ಏಕೆ ಅಂತಹ ವಿಚಿತ್ರ ಬಟ್ಟೆಗಳನ್ನು ಧರಿಸಿದ್ದಾನೆ? ಆತ ಸಂತೋಷವಾಗಿರುವಂತೆ ತೋರುವುದಿಲ್ಲ” ಎಂದು ಕಮೆಂಟ್‌ ಮಾಡಿದ್ದಾರೆ. ಇದಲ್ಲದೇ ವಕೀಲರಾದ ನಿತಿನ್ ಮೇಶ್ರಮ್ ಎನ್ನುವವರು “ಉಪನಯನವು ಸಂವಿಧಾನದ 15 ಮತ್ತು 17 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. ಅದನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಬೇಕು. ಯಾರಾದರೂ ಬ್ರಾಹ್ಮಣ ಎಂದು ಘೋಷಿಸಿಕೊಂಡರೆ ಅದು ವರ್ಣ ಮತ್ತು ಜಾತಿ ಶ್ರೇಣಿಯ ಮರುಹುಟ್ಟಿಗೆ ಕಾರಣವಾಗುತ್ತದೆ. ಇದು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿನ ಸಮಾನತೆಯ ತತ್ವವನ್ನು ಉಲ್ಲಂಘಿಸುತ್ತದೆ. ಸಂವಿಧಾನದ ಪ್ರಕಾರ ಜಾತಿಯು ಕಾನೂನು ಬಾಹಿರವಾದುದು. ಹಾಗಾಗಿ ಇಂತಹ ಸಮಾರಂಭಗಳಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಮೂರು ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಬೇಕು” ಎಂದು ಬಹಿರಂಗವಾಗಿ ಕಾಮೆಂಟ್‌ ಮಾಡಿದ್ದಾರೆ.

“ಕೈತುತ್ತು ನೀಡುವುದಕ್ಕೆ ಆತನಿಗೆ ವಯಸ್ಸಾಗಿಲ್ಲವೇ?” ಎಂದು ಟ್ವಿಟರ್ ಬಳಕೆದಾರ ಅರ್ಬನ್‌ಶ್ರಿಂಕ್ ಟೀಕಿಸಿದ್ದರೆ “ಆತ ಪುರುಷ ಮಗು” ಎಂದು ಮತ್ತೊಬ್ಬ ಟ್ವೀಟರ್‌ ಬಳಕೆದಾರ ಜಗೀಶಾ ಅರೋರಾ ಕೊಂಕು ಮಾತಾಡದ್ದಾರೆ.. “ನೀವು ಈ ರೀತಿ ಮಾಡುವ ಮೂಲಕ ನಿಮ್ಮ ಸ್ವಂತ ಮಕ್ಕಳನ್ನು ಮಾನಸಿಕವಾಗಿ ಆಘಾತಗೊಳಿಸುತ್ತಿದ್ದೀರಿ. ಬ್ರಾಹ್ಮಣರಂತೆ ಇದನ್ನು ಯಾರೂ ಮಾಡಲು ಸಾಧ್ಯವಿಲ್ಲ” ಎಂದು ಅಬ್ಬಕ್ಕ ಹೈಪಾಟಿಯಾ ಎಂಬಾಕೆ ಟ್ವಿಟ್ಟರಿನಲ್ಲಿ ಮಾಡಿರುವ ಕುಚೋದ್ಯ.

ಈ ಕುರಿತು ರೂಪಾ ಮೂರ್ತಿ ಪ್ರತಿಕ್ರಿಯಿಸಿದ್ದು “ಇದೇ ವಕೀಲ ನಿತಿನ್ ಮೇಶ್ರಮ್ ನಾಲ್ಕು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರದ ಪ್ರಕರಣವೊಂದರಲ್ಲಿ ಆರೋಪಿಯ ಪರವಾಗಿ ವಕಾಲತ್ತು ವಹಿಸಿ ಆತನ ಶಿಕ್ಷೆ ಕಡಿಮೆ ಮಾಡಿಸಿದ್ದರು. ಲೇಖಕ ದಿಲೀಪ್ ಮಂಡಲ್ ಕ್ಯಾಲಿಫೋರ್ನಿಯಾ ರಾಜ್ಯ ನ್ಯಾಯಾಂಗ ಸಮಿತಿಯಿಂದ ಜಾತಿ ವಿರೋಧಿ ಮಸೂದೆಯ ಅಂಗೀಕಾರವನ್ನುಸಂಭ್ರಮಿಸುತ್ತಿದ್ದಾರೆ. ಒಳ್ಳೆಯದು… ಆದರೆ ಇವರಿಬ್ಬರಿಗೆ 17 ವರ್ಷದ ಅಪ್ರಾಪ್ತ ವಯಸ್ಕ ಬಾಲಕನೊಬ್ಬ ಜನಿವಾರ ಧರಿಸಿರುವುದು ಬೆದರಿಕೆಯಂತೆ ತೋರುತ್ತಿದೆ. ಯಾವ ಬಾಲಕನ ಅಸ್ತಿತ್ವ ಈವರೆಗೆ ಗೊತ್ತೇ ಇರಲಿಲ್ಲವೋ ಅಂಥವನ ಬಗ್ಗೆಯೂ ಇವರ ದ್ವೇಷ! ಅಪ್ರಾಪ್ತ ವಯಸ್ಕ ಬಾಲಕನೊಬ್ಬ ಜನಿವಾರ ಧರಿಸುವುದನ್ನು, ಆತ ಬ್ರಾಹ್ಮಣ ಎಂಬ ಕಾರಣಕ್ಕೆ ವಿರೋಧಿಸುತ್ತಿರುವ ಇಂಥವರನ್ನೆಲ್ಲ ಈ ಸಮಾಜ ಜಾತಿ ವಿರೋಧಿ ಹೋರಾಟಗಾರರೆಂದು ಗುರುತಿಸುತ್ತಿದೆ…” ಎಂದು ಬೇಸರ ಮತ್ತು ಆಕ್ರೋಶ ಹೊರಹಾಕಿದ್ದಾರೆ.

ಬಹಳಷ್ಟು ಟ್ವಿಟ್ಟರ್ ಬಳಕೆದಾರರೂ ಈ ಆಕ್ರೋಶಕ್ಕೆ ಧ್ವನಿಗೂಡಿಸಿದ್ದು, “ಜನಿವಾರ ಹಾಕಿದೊಡನೆ ಬ್ರಾಹ್ಮಣ್ಯವೇ ಶ್ರೇಷ್ಟ-ಇತರರು ಕನಿಷ್ಟ ಅಂತ ಹೇಳಿದಂತಾಯಿತೇ? ಒಬ್ಬರ ಸಂಪ್ರದಾಯವನ್ನು ಇತರರಿಗೆ ಹಾನಿ ಮಾಡದೇ ಪಾಲಿಸಿಕೊಂಡಿರುವುದಕ್ಕೆ ಸಂವಿಧಾನ-ಕಾನೂನುಗಳೆಲ್ಲ ಅವಕಾಶ ಕೊಟ್ಟಿರುವಾಗ ತಮ್ಮನ್ನು ತಾವು ಸಂವಿಧಾನ ಪಂಡಿತರೆಂದು ಹೇಳಿಕೊಳ್ಳುವವರು ಜನಿವಾರ ಹಾಕಿದವರೆಲ್ಲ ಜೈಲಿಗೆ ಹೋಗಬೇಕೆಂದು ಆಗ್ರಹಿಸಿ ಬೆದರಿಸುವುದು ಎಂಥ ಕೊಳಕು ಮನಸ್ಥಿತಿ” ಎಂದೆಲ್ಲ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ತಮ್ಮನ್ನು ತಾವು ಸಂವಿಧಾನದ ರಕ್ಷಕರು, ಸಮಾನತೆಯ ಹರಿಕಾರರು ಎಂದು ಗುರುತಿಸಿಕೊಳ್ಳುವ ತಥಾಕಥಿತ ಬುದ್ಧಿಜೀವಿಗಳು ಹೀಗೆ ಸಾಮಾಜಿಕ ಮಾಧ್ಯಮವೊಂದರಲ್ಲಿ ಜಾತಿಯೊಂದನ್ನು ಉಲ್ಲೇಖಿಸಿ, ಅಥವಾ ಧರ್ಮದಾಚರಣೆಯನ್ನು ಪ್ರಶ್ನಿಸುವ ಆ ಮೂಲಕ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೇ ಪ್ರಶ್ನಿಸುವುದು ಎಷ್ಟು ಸರಿ? ಎಂಬ ಪ್ರಶ್ನೆಯ ಹುಟ್ಟಿಗೆ ಈ ಘಟನೆ ಕಾರಣವಾಗಿದೆ. ಆಜಾನ್‌, ಹಿಜಾಬ್‌ ವಿಷಯದಲ್ಲಿ ಅನ್ವಯವಾಗದ ಸಮಾನತೆ ಉಪನಯನದ ಫೋಟೋ ಹಂಚಿಕೊಂಡಾಗ ಅನ್ವಯವಾಗುತ್ತದಾ? ಸಮಾನತೆಯ ಹೆಸರಿನಲ್ಲಿ ಬ್ರಾಹ್ಮಣ ನಿಂದೆ ಎಷ್ಟು ಸರಿ? ಎಂಬೆಲ್ಲ ಪ್ರಶ್ನೆಗಳ ಹುಟ್ಟಿಗೂ ಇದು ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!