ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಚರ್ಚೆಯ ಸಂದರ್ಭ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಅವರು ನೀಡಿದ ಹೇಳಿಕೆ ರಾಜ್ಯಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಇದರ ಬೆನ್ನಲ್ಲೇ ಕ್ಷಮೆಯಾಚಿಸಿದ್ದಾರೆ.
ಖರ್ಗೆ ಉಪ ಸಭಾಧ್ಯಕ್ಷರಿಗೆ ಅಸಂಸದೀಯ ಭಾಷೆ ಬಳಸಿದ್ದಕ್ಕಾಗಿ ಬಿಜೆಪಿ ಸಂಸದರು ತರಾಟೆಗೆ ತೆಗೆದುಕೊಂಡ ಹಿನ್ನಲೆ ಅವರು ಕ್ಷಮೆ ಕೇಳಿದರು. ನಂತರ ಅ ಪದವನ್ನು ರಾಜ್ಯಸಭೆಯ ದಾಖಲೆಗಳಿಂದ ತೆಗೆದುಹಾಕಲಾಯಿತು.
ರಾಜ್ಯಸಭೆಯಲ್ಲಿ ಶಿಕ್ಷಣ ಸಚಿವಾಲಯದ ಕಾರ್ಯವೈಖರಿಯ ಕುರಿತು ಚರ್ಚೆ ನಡೆಯುತ್ತಿತ್ತು, ಈ ವೇಳೆ ಡಿಎಂಕೆ ಸಂಸದರನ್ನು ಅನಾಗರಿಕರು ಎಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಲು ಪ್ರತಿಪಕ್ಷಗಳು ಗದ್ದಲ ಮಾಡಿದವು.
ಗದ್ದಲದ ನಡುವೆಯೇ ಉಪ ಸಭಾಪತಿ ಹರಿವಂಶ್ ಅವರು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಮಾತನಾಡಲು ಸೂಚಿಸಿದರು. ಆದ್ರೆ ಎದ್ದು ನಿಂತ ಮಲ್ಲಿಕಾರ್ಜುನ್ ಖರ್ಗೆ ತಮ್ಮಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಆದರೆ ಉಪ ಸಭಾಪತಿ ಹರಿವಂಶ್ ಇದಕ್ಕೆ ನಿರಾಕರಿಸಿದರು. ಇದರಿಂದ ಕುಪಿತಗೊಂಡ ಖರ್ಗೆ ಪೀಠದತ್ತ ಕೈ ಮಾಡಿ ಇದು ಸರ್ವಾಧಿಕಾರ ಎಂದು ಹೇಳಿದರು. ಅಲ್ಲದೇ ನೀವು ಬೇರೆ ಏನೋ ಹೊಡೆಯಲು ಬಯಸುತ್ತೀರಿ, ನಾವೇ ಅದನ್ನು ಸರಿಯಾಗಿ ಹೊಡೆಯುತ್ತೇವೆ ಎಂದರು. ಖರ್ಗೆ ಅವರ ಈ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ನಡೆಸಿದರು.
ಗದ್ದಲ ಮುಂದುವರಿದಂತೆ ಮಲ್ಲಿಕಾರ್ಜುನ್ ಖರ್ಗೆ ಉಪಸಭಾಪತಿಯವರಿಗೆ ಕ್ಷಮೆಯಾಚಿಸಿದರು. ನಾನು ಅಧ್ಯಕ್ಷರ ಬಗ್ಗೆ ಅಂತಹ ಪದಗಳನ್ನು ಬಳಸಿಲ್ಲ. ನನ್ನ ಮಾತುಗಳಿಂದ ಉಪಸಭಾಪತಿಯವರಿಗೆ ನೋವಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ. ಆದರೆ ನಾನು ಸರ್ಕಾರದ ನೀತಿಗಳನ್ನು ಟೀಕಿಸುತ್ತಿದ್ದೆ ಎಂದು ಅವರು ಹೇಳಿದರು.