ಹೊಸದಿಗಂತ ಡಿಜಿಟಲ್ ಡೆಸ್ಕ್:
ಹವಾಯಿಯಲ್ಲಿ ವಿನಾಶಕಾರಿ ಕಾಳ್ಗಿಚ್ಚಿಗೆ ಬಲಿಯಾದವರ ಸಂಖ್ಯೆ 67ಕ್ಕೆ ಏರಿದೆ. ಬೆಂಕಿ ಇನ್ನೂ ಹತೋಟಿಗೆ ಬಂದಿಲ್ಲ ಎಂದು ಅಲ್ಲಿನ ಸರ್ಕಾರ ಕಳವಳ ಹೊರಹಾಕಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಯಿ ಗವರ್ನರ್ ಜೋಶ್ ಗ್ರೀನ್ ಆತಂಕ ವ್ಯಕ್ತಪಡಿಸಿದರು. ಎಲ್ಲಿ ಕಣ್ಣಾಡಿಸಿದರೂ ಸುಟ್ಟು ಬೂದಿಯಾದ ಅವಶೇಷಗಳೇ ಕಾಣುತ್ತಿವೆ.
ಸಂಭವಿಸಿದ ಸಾವುಗಳೆಲ್ಲಾ ತೆರೆದ ಸ್ಥಳದಲ್ಲೇ ಆಗಿವೆ, ಕಡ್ಡಗಳಲ್ಲಿ ಅಲ್ಲ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಹೋಗಿ ಹೆಚ್ಚಿನ ಅನಾಹುತ ಸಂಭವಿಸುತ್ತಿವೆ.
ಉರಿಯುತ್ತಿರುವ ಬೆಂಕಿಗೆ ಚಂಡಮಾರುತದ ಬಿರುಗಾಳಿ ಸೋಕಿ ಇನ್ನಷ್ಟು ದುರಂತಗಳು ಉಂಟಾಗಿವೆ. ರಕ್ಷಣಾ ತಂಡಗಳಿಗೂ ಇಷ್ಟು ದೊಡ್ಡ ಮಟ್ಟದ ಬೆಂಕಿಯಿಂದ ಜನರನ್ನು ರಕ್ಷಿಸುವುದು ಸವಾಲಾಗಿದೆ ಎಂದರು. ಬೆಂಕಿಯಿಂದಾಗಿ ಟೆಲಿಕಮ್ಯುನಿಕೇಶನ್‌ಗಳು ನಾಶವಾಗಿದ್ದು, ಸಂವಹನ ಅಸಾಧ್ಯವಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಕೂಡ ಇದನ್ನು “ದೊಡ್ಡ ವಿಪತ್ತು” ಎಂದು ಕರೆದಿದ್ದು, ಶುಕ್ರವಾರ ಹವಾಯಿ ಗವರ್ನರ್ ಜೊತೆ ಮಾತನಾಡಿದರು. ಅವಶ್ಯವಿರುವ ಅಗತ್ಯತೆಗಳನ್ನು ಪೂರೈಸುವುದಾಗಿ ಬಿಡೆನ್ ಭರವಸೆ ನೀಡಿದರು.
ಶ್ವೇತಭವನದ ಹೇಳಿಕೆಯ ಪ್ರಕಾರ, ಬಿಡೆನ್ ಘೋಷಿಸಿದ ನೆರವು ತಾತ್ಕಾಲಿಕ ವಸತಿ ಮತ್ತು ಮನೆ ರಿಪೇರಿಗೆ ಅನುದಾನ, ವಿಮೆ ಮಾಡದ ಆಸ್ತಿ ನಷ್ಟವನ್ನು ಸರಿದೂಗಿಸಲು ಕಡಿಮೆ ವೆಚ್ಚದ ಸಾಲಗಳು, ಜನರು ಮತ್ತು ವ್ಯಾಪಾರ ಮಾಲೀಕರಿಗೆ ವಿಪತ್ತಿನ ಪರಿಣಾಮಗಳಿಂದ ಚೇತರಿಸಿಕೊಳ್ಳಲು ಸಹಾಯ ಮಾಡುವ ಇತರ ಕಾರ್ಯಕ್ರಮಗಳನ್ನು ಒಳಗೊಂಡಿದೆ.