ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಮೆರಿಕ ನೌಕಾಪಡೆ ಭಾರತೀಯ ವಿಶೇಷ ಆರ್ಥಿಕ ವಲಯ (ಇಇಝೆಡ್)ದ ಒಳಗೆ ‘ನ್ಯಾವಿಗೇಷನ್ ಆಪರೇಷನ್(ಸ್ವತಂತ್ರ ಕಾರ್ಯಾಚರಣೆ)’ ನಡೆಸಿದ್ದು ಕಾನೂನು ಉಲ್ಲಂಘನೆಯಾಗುವುದಿಲ್ಲ ಆದರೆ ಅಗೌರವವಾಗುತ್ತದೆ ಎಂದು ಶಶಿ ತರೂರ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಅಧೀನ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಅಮೆರಿಕದ ನಡೆ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗುವುದಿಲ್ಲ. ಅದು ಭಾರತಕ್ಕೆ ತೋರಿದ ಅಗೌರವವಾಗುತ್ತದೆ. ಸಮುದ್ರಕ್ಕೆ ಸಂಬಂಧಿಸಿದ ಕಾನೂನಿನಲ್ಲಿ, ಇಇಝೆಡ್ ನಲ್ಲಿ ಅಮೆರಿಕ ನೌಕೆ ಕಾರ್ಯಾಚರಣೆ ನಡೆಸಿದ್ದನ್ನು ವಿರೋಧಿಸುವ ಭಾರತದ ವಾದಕ್ಕೆ ಬೆಂಬಲ ದೊರೆಯುವಂತಹ ಅಂಶಗಳಿಲ್ಲ ಎಂದಿದ್ದಾರೆ.
ಭಾರತ ಈ ಸಮಸ್ಯೆಗೆ ರಾಜತಾಂತ್ರಿಕವಾಗಿಯೇ ಪರಿಹಾರ ಕಂಡುಕೊಳ್ಳಬೇಕು ಎಂದು ಟ್ವೀಟ್ ಮಾಡಿರುವ ಶಶಿ ತರೂರ್ ಇದಕ್ಕಾಗಿ ಸಲಹೆಯನ್ನೂ ನೀಡಿದ್ದಾರೆ.
ಈ ರೀತಿಯ ಕಾರ್ಯಾಚರಣೆಗಳನ್ನು ನಡೆಸಬೇಕಾದರೆ ಪೂರ್ವಾನುಮತಿ ಪಡೆಯುವುದಾಗಿ ಅಮೆರಿಕಾದಿಂದ ಸ್ಪಷ್ಟ ಪತ್ರವನ್ನು ಪಡೆಯಬೇಕು, ನಮ್ಮನ್ನು ಅವರು ಲೆಕ್ಕಿಸುವುದಿಲ್ಲ ಎಂಬ ಸಂದೇಶ ಹೋಗದಂತೆ ಎಚ್ಚರ ವಹಿಸಬೇಕು ಎಂದು ಶಶಿ ತರೂರ್ ಹೇಳಿದ್ದಾರೆ.