ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಅಮೆರಿಕ ಗುಪ್ತಚರ ಮುಖ್ಯಸ್ಥ ಹಾಗೂ ರಷ್ಯದ ರಾಷ್ಟ್ರೀಯ ಭದ್ರತಾ ಸಲಹೆಗಾರ ಇಬ್ಬರೂ ಭಾರತಕ್ಕೆ ಭೇಟಿ ನೀಡಿ ಇಲ್ಲಿನ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಅಫಘಾನಿಸ್ತಾನ ವಿಚಾರವಾಗಿ ಚರ್ಚಿಸಿದ್ದಾರೆ. ಅಫ್ಘನ್ ವಿಚಾರದಲ್ಲಿ ಅಮೆರಿಕದ ಎಡವಟ್ಟುಗಳು ಏನೇ ಇದ್ದರೂ, ರಷ್ಯದ ನಿಲುವಗಳೇನೇ ಆದರೂ ಈ ಪ್ರಾಂತ್ಯದಲ್ಲಿ ಭಾರತವನ್ನು ಹೊರಗಿಟ್ಟು ರಕ್ಷಣಾ ಕಾರ್ಯತಂತ್ರವನ್ನು ರೂಪಿಸಲಾಗದು ಎಂಬ ಸಂದೇಶವನ್ನು ಇದು ನೀಡುತ್ತಿದೆ.
ತಾಲಿಬಾನ್ ಸರ್ಕಾರ ರಚನೆಯಿಂದ ಉಂಟಾಗುವ ಸಮಸ್ಯೆಗಳನ್ನು ಚರ್ಚಿಸಲು ಕೇಂದ್ರ ಗುಪ್ತಚರ ಏಜೆನ್ಸಿ ಮುಖ್ಯಸ್ಥ ವಿಲಿಯಂ ಬರ್ನ್ಸ್ ನೇತೃತ್ವದ ಗುಪ್ತಚರ ಮತ್ತು ಭದ್ರತಾ ಅಧಿಕಾರಿಗಳ ಅಮೆರಿಕ ನಿಯೋಗವು ಮಂಗಳವಾರ ಭಾರತಕ್ಕೆ ಭೇಟಿ ನೀಡಿದೆ. ಇದಾದ ನಂತರ ಇವರು ಇಸ್ಲಾಮಾಬಾದ್ ಗೂ ತೆರಳಲಿದ್ದಾರೆ.
ಇದರ ಬೆನ್ನಲ್ಲೇ ಬುಧವಾರ ರಷ್ಯದ ಭದ್ರತಾ ಸಲಹೆಗಾರರು ಅಫ್ಘನ್ ವಿಚಾರವಾಗಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಭದ್ರತಾ ಮಂಡಳಿಯ ರಷ್ಯಾದ ಕಾರ್ಯದರ್ಶಿ ಜನರಲ್ ನಿಕೋಲಾಯ್ ಪತ್ರುಶೆವ್ ಅವರು ಪ್ರಧಾನಿ ಮೋದಿ, ಎನ್ ಎಸ್ಎ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್. ಜಯಶಂಕರ್ ಅವರನ್ನು ಇಂದು ಭೇಟಿ ಮಾಡಲಿದ್ದಾರೆ.
ಮೊಹಮ್ಮದ್ ಹಸನ್ ಅಖುಂದ್ ಮತ್ತು ಅಬ್ದುಲ್ ಘನಿ ಬರದಾರ್ ನೇತೃತ್ವದಲ್ಲಿ ತಾಲಿಬಾನ್ ಮಧ್ಯಂತರ ಸರ್ಕಾರ ಘೋಷಿಸಿದ ಕಾರಣ ಭಾರತದ ಭದ್ರತಾ ರಕ್ಷಣಾ ಆಡಳಿತವು ಅಮೆರಿಕ ಮತ್ತು ರಷ್ಯ ಎರಡೂ ದೇಶಗಳೊಂದಿಗೆ ಪರಿಸ್ಥಿತಿ ನಿರ್ವಹಣೆ ನಿಟ್ಟಿನಲ್ಲಿ ಮಾತುಕತೆಯಲ್ಲಿದೆ. ಸದ್ಯದಲ್ಲೇ ಶಾಂಘೈ ಕೋಆಪರೇಷನ್ ಆರ್ಗನೈಸೋಷನ್ ಮತ್ತು ಮತ್ತು ಕ್ವಾಡ್ ಸಮಾವೇಶಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಇಲ್ಲಿ ರಷ್ಯಾ ಮತ್ತು ಯುಎಸ್ ಕ್ರಮವಾಗಿ ಮುಖ್ಯ ಪಾತ್ರ ವಹಿಸುತ್ತವೆ ಮತ್ತು ಎರಡೂ ದೇಶಗಳು ಅಫ್ಘಾನಿಸ್ತಾನದ ಭವಿಷ್ಯದ ಬಗ್ಗೆ ಗಮನ ಹರಿಸುವ ನಿರೀಕ್ಷೆ ಇದೆ.