ದೇಶದಲ್ಲಿ ಉಲ್ಭಣಿಸಿದ ಹಿಜಾಬ್‌ ವಿವಾದದ ಹಿಂದೆ ಅಮೆರಿಕದ ಸಂಚಿದೆ: ಇರಾನ್ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪೊಲೀಸ್ ಕಸ್ಟಡಿಯಲ್ಲಿ ಮಹಿಳೆಯೊಬ್ಬರ ಸಾವಿನ ಬಗ್ಗೆ ಹಾಗೂ ವಿವಾದವನ್ನು ಇರಾನ್‌ ನಿರ್ವಹಿಸುತ್ತಿರುವ  ರೀತಿಯ ಬಗ್ಗೆ ಅಂತರಾಷ್ಟ್ರೀಯವಾಗಿ ಭಾರೀ ಟೀಕೆಗಳು ಕೇಳಿಬರುತ್ತಿವೆ. ಈ ನಡುವೆ ಹಿಜಾಬ್‌ ವಿವಾದ ಉಲ್ಬಣಿಸಲು ಅಮೆರಿಕಾವೇ ಕಾರಣ ಎಂದು ಆರೋಪಿಸಿರುವ ಇರಾನ್‌, ಈ ವಿವಾದ ಮೂಲಕ ಅಮೆರಿಕ ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಇದು ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿದೆ.
ಕೆಲದಿನಗಳ ಹಿಂದೆ 22 ವರ್ಷದ ಕುರ್ದಿಶ್ ಮಹಿಳೆ ಮಹ್ಸಾ ಅಮಿನಿಯನ್ನು ಹಿಜಾಬ್‌ ಸರಿಯಾಗಿ ಧರಿಸದ ಕಾರಣಕ್ಕೆ ಹೊಡೆದುಕೊಲ್ಲಲಾಗಿತ್ತು. ಈ ಪ್ರಕರಣದ ಬಳಿಕ ಇರಾನ್‌ ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಜೊತೆಗೆ ಇರಾನಿಯನ್ನರು ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಮತ್ತು ಉಳಿದ ಧರ್ಮಗುರುಗಳನ್ನು ಅಧಿಕಾರದಿಂದ ಕೆಳಗಿಳಿಯಲು ಆಗ್ರಹಿಸುತ್ತಿದ್ದಾರೆ.
ಟ್ವಿಟರ್‌ ನಲ್ಲಿ ಶೇರ್‌ ಆಗಿರುವ ವಿಡಿಯೋಗಳಲ್ಲಿ, ಟೆಹ್ರಾನ್‌ನ ವಿವಿಧ ಭಾಗಗಳಲ್ಲಿ ಸೋಮವಾರ ತಡರಾತ್ರಿ 1500  ಕ್ಕೂ ಹೆಚ್ಚು ಮಂದಿ ಪ್ರತಿಭಟನೆಗಳನ್ನು ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಮತ್ತು ನಿವಾಸಿಗಳು ತಮ್ಮ ಮನೆಗಳಿಂದ “ಡೆತ್ ಟು ಖಮೇನಿ” ಎಂದು ಕೂಗುವುದನ್ನು ಕೇಳಬಹುದು.
ಮಹಿಳೆಯರು ತಮ್ಮ ತಮ್ಮ ಹಿಜಾಬ್‌ ತಗೆದು ಬೀಸುವ ಮತ್ತು ಸುಡುವ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಈ ಬಗ್ಗೆ ಅಮೆರಿಕ ವಿರುದ್ದ ಕಿಡಿಕಾರಿರುವ ಇರಾನ್‌, ಯುನೈಟೆಡ್ ಸ್ಟೇಟ್ಸ್ ಗಲಭೆಕೋರರನ್ನು ಬೆಂಬಲಿಸುತ್ತಿದೆ ಮತ್ತು ಇಸ್ಲಾಮಿಕ್ ಗಣರಾಜ್ಯವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಇರಾನ್ ಹೇಳಿದೆ.
“ವಾಷಿಂಗ್ಟನ್ ಯಾವಾಗಲೂ ಇರಾನ್‌ನ ಸ್ಥಿರತೆ ಮತ್ತು ಭದ್ರತೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ ಅದರ ಪ್ರಯತ್ನ ವಿಫಲವಾಗಿದೆ” ಎಂದು ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ನಾಸರ್ ಕನಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳ ನಾಯಕರು “ಗಲಭೆಕೋರರನ್ನು” ಬೆಂಬಲಿಸಲು ದುರಂತ ಘಟನೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರ ಬೆಂಬಲ ಪಡೆದ ಲಕ್ಷಾಂತರ ಜನರು ದೇಶದ ಬೀದಿಗಳಲ್ಲಿ ಪ್ರತಿಭಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇರಾನ್‌ನ ನೈತಿಕ ಪೊಲೀಸ್ ಘಟಕ ಮತ್ತು ಅದರ ನಾಯಕತ್ವ ಸೇರಿದಂತೆ ಅಮಿನಿಯ ಸಾವಿಗೆ ಕಾರಣರಾದವರ ಮೇಲೆ ಕೆನಡಾ ನಿರ್ಬಂಧಗಳನ್ನು ವಿಧಿಸುತ್ತದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.
“ಇರಾನ್ ಮಾನವ ಹಕ್ಕುಗಳನ್ನು ಪದೇ ಪದೇ ಕಡೆಗಣಿಸುವುದನ್ನು ನಾವು ನೋಡಿದ್ದೇವೆ, ಈಗ ನಾವು ಅದನ್ನು ಮಹ್ಸಾ ಅಮಿನಿಯ ಸಾವು ಮತ್ತು ಪ್ರತಿಭಟನೆಗಳ ಮೇಲಿನ ದಮನಕಾರಿ ಕ್ರಮಗಳ ಮೂಲಕ ಮತ್ತೊಮ್ಮೆ ನೋಡುತ್ತೇವೆ” ಎಂದು ಒಟ್ಟಾವಾದಲ್ಲಿ ಟ್ರುಡೊ ಹೇಳಿದ್ದಾರೆ.
ಜರ್ಮನಿ ಸಹ ಬರ್ಲಿನ್‌ನಲ್ಲಿರುವ ಇರಾನ್ ರಾಯಭಾರಿಯನ್ನು ಕರೆಸಿಕೊಂಡು ಇರಾನ್ ತನ್ನ ದಬ್ಬಾಳಿಕೆಯ ಕ್ರಮಗಳನ್ನು ನಿಲ್ಲಿಸಲು ಮತ್ತು ಶಾಂತಿಯುತ ಪ್ರತಿಭಟನೆಗಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿದೆ. ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ ಟೆಹ್ರಾನ್ ಮೇಲೆ ಮತ್ತಷ್ಟು ನಿರ್ಬಂಧಗಳ ಸಾಧ್ಯತೆಯ ಬಗ್ಗೆ ಕೇಳಿದಾಗ, ಜರ್ಮನಿಯ ವಿದೇಶಾಂಗ ಸಚಿವಾಲಯದ ವಕ್ತಾರರು “ನಾವು ಎಲ್ಲಾ ಆಯ್ಕೆಗಳನ್ನು ಪರಿಗಣಿಸುತ್ತೇವೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!