Positive story| ಬಿಸಿಯೂಟಕ್ಕೆ ವಿದ್ಯಾರ್ಥಿಗಳೇ ಬೆಳೆದ ಸೊಪ್ಪು- ತರಕಾರಿ ಬಳಕೆ

-ಸುಧೀರ ನಾಯರ್

ಕೈದೋಟ ನಿರ್ಮಿಸಿ ತಾವೇ ಸ್ವತಃ ಬೆಳೆದ ತರಕಾರಿ-ಸೊಪ್ಪಿನ ಬಿಸಿಯೂಟ ಸೇವಿಸುವ ಬನವಾಸಿಯ ಅಜ್ಜರಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಪರಿಸರ ಪ್ರೀತಿ ಇತರರಿಗೆ ಮಾದರಿಯಾಗಿದೆ.
ಇಲ್ಲಿಯ ಮಕ್ಕಳು ತರಕಾರಿ ಹೆಸರನ್ನು ಕೇಳಿದರೆ ತಕ್ಷಣ ಹೇಳಬಲ್ಲರು. ಶಾಲೆಯ ಶಿಕ್ಷಕರು ಮಕ್ಕಳಿಗೆ ಪಠ್ಯದ ಪಾಠ ಮಾಡುವ ಜೊತೆಗೆ ಶಾಲೆಯಂಗಳದಲ್ಲಿ ತರಕಾರಿ ಬೆಳೆಸುತ್ತ, ಮಕ್ಕಳಿಗೆ ಮನುಷ್ಯ ಹಾಗೂ ಮಣ್ಣಿನ ಸಂಬಂಧ ತಿಳಿಸುತ್ತಿದ್ದಾರೆ. ಒಟ್ಟು 76 ಮಕ್ಕಳಿರುವ ಶಾಲೆಯಲ್ಲಿ ಐವರು ಶಿಕ್ಷಕರಿದ್ದಾರೆ. ಶೈಕ್ಷಣಿಕ, ಕ್ರೀಡಾ ಚಟುವಟಿಕೆಯಲ್ಲಿ ಹಲವು ಸಾಧನೆ ಮಾಡಿದ ಕೀರ್ತಿಯೂ ಈ ಶಾಲೆಗಿದೆ. ಬಿಡುವಿನ ವೇಳೆಯಲ್ಲಿ ಶಿಕ್ಷಕರು, ಮಕ್ಕಳು ಸೇರಿ ಕೈತೋಟದಲ್ಲಿ ಬೆಳೆಸಿದ ತರಕಾರಿ ಆರೈಕೆ ಮಾಡುತ್ತಾರೆ. ಮಕ್ಕಳು ತರಕಾರಿ ಗಿಡ ನೆಟ್ಟು ನೀರು ಹಾಯಿಸಿ, ಸಾವಯವ ಗೊಬ್ಬರ ಹಾಕಿ ತರಕಾರಿ ಬೆಳವಣಿಗೆಯ ಹಂತವನ್ನು ಕುತೂಹಲದಿಂದ ನೋಡ್ತಾರೆ. ಕಾಲಕ್ಕೆ ಅನುಗುಣವಾಗಿ ಬೀನ್ಸ್, ಮೂಲಂಗಿ, ಸೌತೆ, ಹೀರೆ, ಬದನೆ ಕಾಯಿ, ಬೆಂಡೆ, ಹಸಿ ಮೆಣಸು, ಟೊಮೆಟೊ, ಹರಿವೆ, ಪಾಲಕ್, ಬಸಲೆ, ಕೊತ್ತಂಬರಿ, ಹಸಿಮೆಣಸು ಹೀಗೆ ಹೊಂದಾಣಿಕೆಯಾಗುವ ತರಕಾರಿ ಬೆಳೆಯುತ್ತಿದ್ದಾರೆ.
ಶಾಲೆಯ ಬಿಸಿಯೂಟಕ್ಕೆ ಬೇಕಾಗುವ ಅರ್ಧದಷ್ಟು ತರಕಾರಿಗಳನ್ನು ಇಲ್ಲಿಯೇ ಬೆಳೆಸುತ್ತೇವೆ. ನಾವೇ ಬೆಳೆಸಿದ ತರಕಾರಿ ಅಡುಗೆ ಮಾಡಿ ಊಟ ಮಾಡ್ತಿವಿ ಅಂತಾರೆ ಇಲ್ಲಿ ಕಲಿಯುವ ವಿದ್ಯಾರ್ಥಿಗಳು.
ಅಕ್ಷರದಾಸೋಹಕ್ಕೆ ನಾವು ಬೆಳೆದ ತರಕಾರಿ-ಸೊಪ್ಪಿನಿಂದ ಅರ್ಧದಷ್ಟು ಹಣ ಉಳಿಯುತ್ತದೆ. ಶಾಲಾಭಿವೃದ್ಧಿ ಸಮಿತಿ ಪ್ರಮುಖರು, ಗ್ರಾಮಸ್ಥರು ಹಾಗೂ ಎಲ್ಲ ಶಿಕ್ಷಕರ ಸಹಕಾರ ಮನೋಭಾವದಿಂದ ಇವೆಲ್ಲವೂ ಸಾಧ್ಯವಾಗಿದೆ. ಶಿಕ್ಷಣ ಇಲಾಖೆಯ ಅಕಾರಿಗಳ ಪ್ರೋತ್ಸಾಹ ನಮ್ಮ ಉತ್ಸಾಹವನ್ನು ಹೆಚ್ಚಿಸಿದೆ ಎನ್ನುತ್ತಾರೆ ಶಾಲಾ ಮುಖ್ಯಶಿಕ್ಷಕ ಪಂಡಿತ್ ವೈ. ಪೋಟೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!