ಮಳೆಗೆ ಹೆದ್ದಾರಿ ತಡೆಗೋಡೆ ಕುಸಿತ; ಮಾರ್ಗಮಧ್ಯೆ ಸಿಲುಕಿದ 10,000 ಯಮುನೋತ್ರಿ ಯಾತ್ರಾರ್ಥಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉತ್ತರಾಖಂಡ್‌ನ ಪವಿತ್ರ ತೀರ್ಥಕ್ಷೇತ್ರ ಯಮುನೋತ್ರಿ ದೇಗುಲಕ್ಕೆ ತೆರಳುವ ಮಾರ್ಗದ ಹೆದ್ದಾರಿಯಲ್ಲಿನ ತಡೆ ಗೋಡೆಯ ಒಂದು ಭಾಗ ಕುಸಿದಿದ್ದರಿಂದ ಸುಮಾರು 10,000 ಯಾತ್ರಾರ್ಥಿಗಳು ರಿಷಿಕೇಶ-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ವಿವಿಧ ಸ್ಥಳಗಳಲ್ಲಿ ಸಿಲುಕಿದ್ದಾರೆ.
ಬುಧವಾರ ಸುರಿದ ಭಾರಿ ಮಳೆಗೆ ಸಾಯನಚಟ್ಟಿ ಮತ್ತು ರಣಚಟ್ಟಿ ನಡುವಿನ ರಸ್ತೆ ಕೊಚ್ಚಿಹೋದ ಹಿನ್ನೆಲೆಯಲ್ಲಿ ಸುಮಾರು 24 ಗಂಟೆಗಳ ಕಾಲ ಮುಚ್ಚಲಾಗಿದ್ದ ಹೆದ್ದಾರಿಯನ್ನು ಗುರುವಾರ ಸಂಜೆ ಸಂಚಾರಕ್ಕೆ ತೆರೆಯಲಾಗಿತ್ತು. ಆದರೆ ತಡೆಗೋಡೆ ಕುಸಿತ ಸಂಭವಿಸಿದ್ದರಿಂದ ಶನಿವಾರ ಮತ್ತೆ ಹೆದ್ದಾರಿ ಸಂಚಾರ ಮುಚ್ಚಲಾಗಿದೆ.
ಇದರಿಂದಾಗಿ ಸಾವಿರಾರು ವಾಹನಗಳು ರಸ್ತೆಯ ನಡುವೆಯೇ ಸಿಲುಕಿಕೊಂಡಿವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ರಾಜೇಶ್ ಪಂತ್ ಮಾತನಾಡಿ, ರಸ್ತೆ ಪುನರಾರಂಭಕ್ಕೆ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ. ಕೆಲವು ಚಿಕ್ಕ ವಾಹನಗಳಿಂದ ಪ್ರಯಾಣಿಕರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಆದರೆ, ದೂರದ ಊರುಗಳಿಂದ ದೊಡ್ಡ ವಾಹನಗಳಲ್ಲಿ ಬಂದ ಜನರನ್ನು ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ರಸ್ತೆ ಪುನರಾರಂಭಕ್ಕೆ 3 ದಿನಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಮುನಾ ನದಿಯ ಉಗಮಸ್ಥಾನ ಯಮುನೋತ್ರಿ ಹಿಮಾಲಯದ ತಪ್ಪಲ್ಲಿರುವ ಅತ್ಯಂತ ಪ್ರಾಚೀನ ಪುಣ್ಯಕ್ಷೇತ್ರವಾಗಿದೆ. ಹಿಂದೂಗಳ ಪವಿತ್ರ ಚತುರ್ಧಾಮಗಳಲ್ಲಿ ಒಂದಾಗಿದೆ. ಯಮುನೋತ್ರಿ ಸಂದರ್ಶಿಸಲು ಉತ್ತರಾಖಂಡದ ಪ್ರಮುಖ ನಗರಗಳಾದ ಹರಿದ್ವಾರ, ಋಷಿಕೇಶ ಮತ್ತು ಡೆಹ್ರಾಡೂನ್ ಮಾರ್ಗವಾಗಿ ಕಡಿದಾದ ರಸ್ತೆಯಲ್ಲಿ ಸಾಗಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!