ಹೊಸದಿಗಂತ ವರದಿ,ಚಿಕ್ಕಮಗಳೂರು:
ದತ್ತಪೀಠಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ಸರ್ಕಾರ ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದು, ಕಾನೂನಿನ ಚೌಕಟ್ಟಿನಲ್ಲಿ ಏನೇನು ಸಾಧ್ಯವಿದೆ ಅದೆಲ್ಲವನ್ನೂ ಮಾಡುವ ಉಪಕ್ರಮಗಳನ್ನು ನಮ್ಮ ಸರ್ಕಾರ ತೆಗೆದುಕೊಳ್ಳುತ್ತದೆಂದು ನೋಡುತ್ತಿದ್ದೇವೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದರು
ಭಾನುವಾರ ದತ್ತಪೀಠದಲ್ಲಿ ಪಾದುಕೆಗಳ ದರ್ಶನ ಪಡೆದು ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ಸಂಪುಟದ ಉಪ ಸಮಿತಿಯನ್ನ ರಚನೆ ಮಾಡಿದೆ, ಇಲ್ಲಿ ಹಿಂದು ಸಂಘಟನೆಗಳು ಮತ್ತು ಹಿಂದೂಗಳು ಯಾವ ಯಾವ ಬೇಡಿಕೆಗಳನ್ನು ಹೇಳಿದ್ದರೋ ಅದೆಲ್ಲವನ್ನೂ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಮುಖ್ಯವಾಗಿ ಇಲ್ಲಿ ಹಿಂದೂ ಅರ್ಚಕರು ನೇಮಕ ಆಗಬೇಕು. ತ್ರಿಕಾಲ ಪೂಜೆ ಆಗಬೇಕು ಎನ್ನುವ ಬೇಡಿಕೆ ಇತ್ತು. ಮುಜರಾಯಿ ದೇವಸ್ಥಾನದಲ್ಲಿ ಹಿಂದೂ ಅರ್ಚಕರ ನೇಮಕ ಆಗಬೇಕಾಗಿರುವುದು, ತ್ರಿಕಾಲ ಪೂಜೆ ಆಗಬೇಕಿರುವುದು ಕಾನೂನಿನ ಚೌಕಟ್ಟಿನಲ್ಲೂ ಸರಿಯಾಗಿದೆ. ನ್ಯಾಯಾಲಯ ಸಹ ಇದೇರೀತಿಯ ಭಾವನೆಯನ್ನು ವ್ಯಕ್ತಪಡಿಸಿದೆ. ಇದನ್ನು ಆಧರಿಸಿ ಸಂಪುಟ ಉಪ ಸಮಿತಿ ಶೀಘ್ರ ತೀರ್ಮಾನ ತೆಗೆದುಕೊಂಡು ಸುತ್ತೋಲೆ ಹೊರಡಿಸಬೇಕೆಂದು ಸರ್ಕಾರ ನಿರ್ಧರಿಸಿದೆ ಅದನ್ನು ಮಾಡುತ್ತದೆ ಎಂದರು.