ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಎಲ್ಲ ರಾಜ್ಯಗಳ ಕೊರೋನಾ ಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ಔಷಧಿ ಕೊರತೆ ಹಾಗೂ ಲಸಿಕೆ ಕೊರತೆ ಬಗ್ಗೆಯೂ ಮಾಹಿತಿ ಪಡೆದ ಪ್ರಧಾನಿ , ಲಸಿಕೆ ವೇಗವನ್ನು ರಾಜ್ಯಗಳು ನಿಧಾನಗೊಳಿಸಬಾರದು ಎಂದು ಹೇಳಿದ್ದಾರೆ.
12 ರಾಜ್ಯಗಳ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಲಾಯಿತು. ಹೆಚ್ಚು ಪ್ರಕರಣವಿರುವ ಜಿಲ್ಲೆಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ಆರೋಗ್ಯ ಸೇವೆಗಳ ಮೂಲಸೌಕರ್ಯಗಳನ್ನು ಸುಧಾರಿಸಲು ಅಗತ್ಯವಾದ ಅಂಶಗಳ ಬಗ್ಗೆ ರಾಜ್ಯಗಳಿಗೆ ನೆರವು ಮತ್ತು ಮಾರ್ಗದರ್ಶನ ನೀಡಬೇಕು ಎಂದು ಪ್ರಧಾನಿ ನಿರ್ದೇಶನ ನೀಡಿದರು.
ಈ ಸಭೆಯಲ್ಲಿ ಕೊರೋನಾ ತಡೆಗಟ್ಟುವಿಕೆಗೆ ತ್ವರಿತ ಮತ್ತು ಸಮಗ್ರ ಕ್ರಮಗಳ ಕುರಿತು ಚರ್ಚಿಸಲಾಗಿದ್ದು, ಔಷಧಿಗಳ ಲಭ್ಯತೆಯ ಬಗ್ಗೆ ಪರಿಶೀಲಿಸಿದರು. ರೆಮೆಡಿಸಿವಿರ್ ಸೇರಿದಂತೆ ಔಷಧಿಗಳ ಉತ್ಪಾದನೆ ಹೆಚ್ಚುತ್ತಿರುವ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು.
45 ವರ್ಷ ಮೇಲ್ಪಟ್ಟ ಸುಮಾರು ಶೇಕಡಾ 31 ರಷ್ಟು ಜನರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಲಾಗಿದೆ. ಲಸಿಕೆ ವೇಗ ನಿಧಾನವಾಗಬಾರದು. ರಾಜ್ಯಗಳಿಗೆ ಸೂಚನೆ ನೀಡಬೇಕೆಂದು ಪ್ರಧಾನಿ ಹೇಳಿದ್ದಾರೆ. ಲಾಕ್ ಡೌನ್ ಜಾರಿಯಲ್ಲಿದ್ದರೂ ಲಸಿಕೆ ಅಭಿಯಾನ ನಡೆಯಬೇಕು. ಲಸಿಕೆ ಅಭಿಯಾನದಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಬೇರೆ ಕೆಲಸ ನೀಡಬಾರದು ಎಂದು ಪಿಎಂ ಸೂಚನೆ ನೀಡಿದ್ದಾರೆ.