ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈಕುಂಠ ಏಕಾದಶಿ, ಶುಭ ಶುಕ್ರವಾರದಂದು ಬೆಂಗಳೂರು ನಗರದ ಹಲವು ದೇವಾಲಯಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಪ್ರಮುಖವಾಗಿ, ಬೆಂಗಳೂರಿನಲ್ಲಿರುವ ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ, ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನ ಮತ್ತು ಇಸ್ಕಾನ್ ದೇವಸ್ಥಾನಗಳಿಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.
ವೈಕುಂಠ ಏಕಾದಶಿ ಹಿನ್ನೆಲೆ ವಿಶೇಷ ಪೂಜೆ, ಅಭಿಷೇಕ ಹಾಗೂ ಲಕ್ಷ್ಮಿ ವೆಂಕಟೇಶ್ವರನಿಗೆ ವಿಶೇಷ ಮಂಗಳರಾತಿ ನೆರವೇರಿಸಲಾಗುತ್ತಿದೆ.
ದೇವಸ್ಥಾನದಲ್ಲಿ ಬೆಳಗಿನ ಜಾವ 3.45ರಿಂದ ದರ್ಶನಕ್ಕೆ ಬರುವವರಿಗೆ ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ ಮಾಡಲಾಗಿದೆ. ಪೂಜೆಯ ನಂತರ ಭಕ್ತರಿಗೆ ಲಾಡು ಮತ್ತು ಪೊಂಗಲ್ ವಿತರಿಸಲಾಗುತ್ತದೆ. ಶಾಸ್ತ್ರೀಯ ಗಾಯಕಿ ವೇದಾ ವಿದ್ಯಾಭೂಷಣ್ ಅವರು ಸಂಗೀತ ಸೇವೆಯನ್ನೂ ನಡೆಸಿಕೊಡಲಿದ್ದಾರೆ.
ಇಸ್ಕಾನ್‌ನ ಸಂಪರ್ಕಾಧಿಕಾರಿ ಚೈತನ್ಯ ದಾಸ್ ಮಾತನಾಡಿ, ಬೆಳಗ್ಗೆ 3 ಗಂಟೆಯಿಂದಲೇ ಸುಪ್ರಭಾತ ಸೇವೆ ಆರಂಭಗೊಂಡಿತ್ತು. 3:30ರ ವೇಳೆಗೆ ಮಹಾಭಿಷೇಕ ನೆರವೇರಿಸಲಾಯಿತು. ಮುಂದೆ ಶ್ರೀಕೃಷ್ಣನಿಗೆ ಲಕ್ಷ ಅರ್ಚನೆ ನಡೆಯಲಿದ್ದು, ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಲಿದೆ. ರಾತ್ರಿ 11 ಗಂಟೆ ವರೆಗೂ ಇಸ್ಕಾನ್ ದೇವಸ್ಥಾನದಲ್ಲಿ ಭಕ್ತರಿಗೆ ಮುಕ್ತವಾಗಿ ದರುಶನ ಸಿಗಲಿದೆ ಎಂದು ತಿಳಿಸಿದ್ದಾರೆ.