ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ನಿನ್ನೆ ಮಂಗಳವಾರದಿಂದ ಒಟ್ಟು ಐದು ದಿನಗಳು ಮೆಟ್ರೋ ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಿಸಿದ್ದು, ಈ ಬಗ್ಗೆ ಮಾಹಿತಿ ಇಲ್ಲದ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಬಂದು ಪರದಾಡುವ ಪರಿಸ್ಥಿತಿ ಉಂಟಾಯಿತು. ದಿನನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ಮೆಟ್ರೊ ರೈಲು ಪ್ರಯಾಣವನ್ನು ನಂಬಿಕೊಂಡಿರುವ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯುಂಟಾಗಿದೆ.
ಮೆಟ್ರೋ ಇಲ್ಲದ ಕಾರಣ ಸಾಕಷ್ಟು ಮಂದಿ ಬಸ್ ಹಾಗೂ ಆಟೋಗಳ ಮೇಲೆ ಅವಲಂಬಿತರಾಗಿದ್ದು, ಆಟೋದಲ್ಲಿ ರೇಟ್ ಹೆಚ್ಚಾಗಿದೆ. ಆಟೋ ಚಾಲಕರಿಗೇನೋ ಇದರಿಂದ ಖುಷಿ ಆಗಿದೆ.ಆದರೆ ಜನ ಆಟೋ ಹತ್ತಲೂ ಆಗದೇ ಬಿಡಲೂ ಆಗದೇ ಪರದಾಡಿದ್ದಾರೆ.
ಬೆಳಗ್ಗೆ 5 ಗಂಟೆಗೆ ಪೀಣ್ಯ ಇಂಡಸ್ಟ್ರಿಯಿಂದ ಹೊರಡುವ ರೈಲುಗಳಿಂದ ನಾಗಸಂದ್ರ, ಜಾಲಹಳ್ಳಿ ಮತ್ತು ದಾಸರಹಳ್ಳಿಯಲ್ಲಿ ಸಾಮಾನ್ಯವಾಗಿ ಹತ್ತುತ್ತಿದ್ದ ಪ್ರಯಾಣಿಕರು ಪೀಣ್ಯದಲ್ಲಿಯೇ ಇಳಿಯಬೇಕಾಗಿ ಬಂತು. ತುಮಕೂರು ಮುಖ್ಯ ರಸ್ತೆಗೆ ಹೋಗುವ ರೈಲಿನ ಸಂಚಾರಕ್ಕೆ ಪ್ರಯಾಣಿಕರು ಸಾಕಷ್ಟು ಉದ್ದ ಸಾಲಿನಲ್ಲಿ ನಿಂತರು.
ಬಿಎಂಆರ್ ಸಿಎಲ್ ನ ಕಳಪೆ ನಿರ್ವಹಣೆ ಇತ್ತೀಚೆಗೆ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯನ್ನುಂಟುಮಾಡುತ್ತಿದೆ. ವಾಹನಗಳಲ್ಲಿ ಬಂದ ಪ್ರಯಾಣಿಕರು ಮುಂದಿನ ನಿಲ್ದಾಣವಾದ ಪೀಣ್ಯ ತನಕ ಸವಾರಿ ಮಾಡಲು ಮುಂದಾದರು. ಜನಸಂದಣಿಯನ್ನು ನಿರ್ವಹಿಸಲು ಎರಡು ಕಡೆ ಕೌಂಟರ್ ತೆರೆಯುವ ಬದಲು, ಬಿಎಮ್‌ಆರ್‌ಸಿಎಲ್ ತನ್ನ ನಿಯಮಿತ ಏಕ ಪ್ರವೇಶವನ್ನು ಮುಂದುವರೆಸಿದ್ದು ಪ್ರಯಾಣಿಕರಿಗೆ ಇನ್ನಷ್ಟು ತೊಂದರೆಯನ್ನುಂಟುಮಾಡಿತು.
ರೈಲು ಕಾರ್ಯಾಚರಣೆಗಳ ಭಾಗಶಃ ಮುಚ್ಚುವಿಕೆಯ ಬಗ್ಗೆ ಅನೇಕರಿಗೆ ತಿಳಿದಿಲ್ಲ ಎಂದು ಪ್ರಯಾಣಿಕರು ಹೇಳುತ್ತಾರೆ. ಬಿಎಂಆರ್‌ಸಿಎಲ್ ನಿನ್ನೆಯಾದರೂ ನಿಲ್ದಾಣದ ಬೋರ್ಡ್ ಗಳು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಘೋಷಣೆ ಮಾಡಬೇಕಿತ್ತು. ಅದನ್ನು ಘೋಷಿಸುವ ಸೂಚನೆಯನ್ನು ನಿಲ್ದಾಣಗಳ ಹೊರಗೆ ಅಂಟಿಸಬೇಕು. ಪ್ರಯಾಣಿಕರಿಗೆ ಸರಿಯಾಗಿ ಸೂಚನೆ ನೀಡಲಿಲ್ಲ ಎನ್ನುತ್ತಾರೆ ಪ್ರಯಾಣಿಕರು.