ಹೊಸದಿಗಂತ ವರದಿ, ಮಡಿಕೇರಿ:
ಕಳೆದ ಕೆಲವು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಬಿಡುವು ನೀಡಿದ್ದ ಮಳೆ ಮಂಗಳವಾರ ರಾತ್ರಿಯಿಂದ ಮತ್ತೆ ಅಬ್ಬರಿಸಲಾರಂಭಿಸಿದೆ.
ಜಿಲ್ಲೆಯ ಮಡಿಕೇರಿ, ವೀರಾಜಪೇಟೆ, ಹೊದ್ದೂರು, ನಾಪೋಕ್ಲು, ಕುಂದಚೇರಿ, ಕೂಡಿಗೆ ಸೇರಿದಂತೆ ವಿವಿಧೆಡೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ರಾತ್ರಿ ಎಂಟು ಗಂಟೆ ಸುಮಾರಿಗೆ ದಿಢೀರಾಗಿ ಆಗಮಿಸಿದ ಮಳೆ ಕೇವಲ ಅರ್ಧ ಗಂಟೆಯಲ್ಲಿ ಒಂದು ಇಂಚಿಗೂ ಅಧಿಕ ಪ್ರಮಾಣದಲ್ಲಿ ಸುರಿಯುವುದರೊಂದಿಗೆ ‘ಆಗಸ್ಟ್ ಆತಂಕ’ವನ್ನು ಸೃಷ್ಟಿಸಿದೆ.
2018ರಲ್ಲಿ ಆ.13ರಂದು ಸುರಿಯಲಾರಂಭಿಸಿದ ಆಶ್ಲೇಷಾ ಮಳೆ 24 ಗಂಟೆಗಳಲ್ಲಿ ಇಡೀ ಕೊಡಗಿನ ಚಿತ್ರಣವನ್ನೇ ಬದಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.