ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಭಾನುವಾರವೂ ಗಾಳಿ- ಮಳೆ ಅವಾಂತರ ಸೃಷ್ಟಿಸಿದೆ.
ಶನಿವಾರ ಸಂಜೆ ಬೀಸಿದ ಗಾಳಿ ಮಳೆಗೆ ವೀರಾಜಪೇಟೆ ತಾಲೂಕಿನ ವಿವಿಧೆಡೆ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ ಹಲವಾರು ಗ್ರಾಮಗಳು ಕಾರ್ಗತ್ತಲಲ್ಲಿ ಮುಳುಗಿದ್ದರೆ, ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದಲ್ಲಿ ಮರ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದರು. ವಿದ್ಯುತ್ ಸಮಸ್ಯೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ದೂರವಾಣಿ ಸಂಪರ್ಕವೂ ಅಸ್ತವ್ಯಸ್ತಗೊಂಡಿದೆ.
ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ಬಿಡುವು ನೀಡಿದ್ದ ಮಧ್ಯಾಹ್ನದಿಂದ ಮತ್ತೆ ಧಾರಾಕಾರವಾಗಿ ಸುರಿಯಲಾರಂಭಿಸಿದ್ದು, ಇದರೊಂದಿಗೆ ಬಲವಾದ ಗಾಳಿ ಬೀಸಿದ ಪರಿಣಾಮ ಅಲ್ಲಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.
ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಟಕೇರಿ ಬಳಿ ಲಾರಿಯ ಮೇಲೆ ಮರ ಬಿದ್ದ ಪರಿಣಾಮ ಸ್ವಲ್ಪ ಕಾಲ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತಾದರೂ, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಕುಶಾಲನಗರ- ಸೋಮವಾರಪೇಟೆ ಮಾರ್ಗ ಮಧ್ಯದಲ್ಲಿ ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದರೆ, ಪೊನ್ನಂಪೇಟೆ ತಾಲೂಕಿನ ಕಾನೂರಿನಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬಗಳ ತುದಿ ಭಾಗ ತುಂಡರಿಸಿ ತಂತಿಯ ಆಸರೆಯಲ್ಲಿ ನೇತಾಡುತ್ತಿದ್ದ ದೃಶ್ಯ ಕಂಡು ಬಂದಿದೆ. ಇತ್ತ ಕುಶಾಲನಗರ – ಸಿದ್ದಾಪುರ ರಸ್ತೆಯ ಕೃಷ್ಣಾಪುರ ಬಳಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿದ್ದು, ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರು ಯಂತ್ರದ ಮೂಲಕ ಮರವನ್ನು ತುಂಡರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಭಾಗಮಂಡಲ-ನಾಪೋಕ್ಲು ರಸ್ತೆಯಲ್ಲೂ ಮರದ ಕೊಂಬೆಗಳು ರಸ್ತೆಗೆ ಬಿದ್ದಿರುವ ಬಗ್ಗೆ ವರದಿಯಾಗಿದೆ.
ಬ್ರಹ್ಮಗಿರಿ ಪರ್ವತ ಶ್ರೇಣಿಯುದ್ದಕ್ಕೂ ಧಾರಾಕಾರ ಮಳೆಯಾಗುತ್ತಿದ್ದಿ, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಜಿಲ್ಲೆಯ ಬಹುತೇಕ ನದಿ ತೊರೆಗಳು ತುಂಬಿ ಹರಿಯಲಾರಂಭಿಸಿದ್ದು, ಶನಿವಾರ ರಾತ್ರಿ ಮತ್ತು ಭಾನುವಾರ ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಕಾಣಿಸಿಕೊಂಡಿದ್ದು, ಹಲವು ಕಾಫಿ ತೋಟಗಳಲ್ಲಿ ಮರಗಳು ಹಾಗೂ ಕೊಂಬೆಗಳು ಕಾಫಿ ಗಿಡಗಳ ಮೇಲೆ ಬಿದ್ದ ಪರಿಣಾಮ ಹಲವು ಬೆಳೆಗಾರರಿಗೆ ನಷ್ಟ ಉಂಟಾಗಿದೆ.
ಹವಾಮಾನ ಇಲಾಖೆಯ ವರದಿಯಂತೆ ಮೇ 31ರವರೆಗೂ ಕೊಡಗಿನಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ. ಮಳೆಯ ಪ್ರಮಾಣ ಏರಿಕೆಯಾದರೆ, ನೆಲ್ಲಿಹುದಿಕೇರಿ, ಸಿದ್ದಾಪುರದ ಕರಡಿಗೋಡು ಸೇರಿದಂತೆ ಕಾವೇರಿ ನದಿ ದಂಡೆಯ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಲು ಚಿಂತನೆ ನಡೆಸಲಾಗಿದೆ.