ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಿಂದ ಅಪಾರ ಮಟ್ಟದಲ್ಲಿ ಹಾನಿಯಾಗಿದೆ. ಸಾವನ್ನಪ್ಪಿದವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ನಾಪತ್ತೆಯಾದವರೆಲ್ಲರೂ ಇನ್ನು ಪತ್ತೆಯಾಗಿಲ್ಲ. 16 ಮಂದಿಯ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ನಾಲ್ಕು ಜಿಲ್ಲೆಗಳಲ್ಲಿ ಮಳೆ ಪ್ರವಾಹದಿಂದ ಉಂಟಾದ ಹಾನಿ ಮತ್ತು ಸಂತ್ರಸ್ತರಿಗೆ ನೆರವಾಗಿ ಆಂಧ್ರಪ್ರದೇಶ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
“ರಾಯಲಸೀಮಾದ ಕಡಪ, ಚಿತ್ತೂರು ಮತ್ತು ಅನಂತಪುರ ಹಾಗೂ ನೆಲ್ಲೂರು ಜಿಲ್ಲೆಯಲ್ಲಿ ನವೆಂಬರ್ನಲ್ಲಿ ಅನಿರೀಕ್ಷಿತ ಭಾರೀ ಮಳೆಯಾಗಿದೆ. ಈ ತಿಂಗಳ ಮೊದಲ ವಾರದ ನಂತರ ಶುರುವಾದ ಮಳೆ ಇಂದಿಗೂ ಕೂಡ ಸುರಿಯುತ್ತಲೇ ಇದೆ. ಆಂಧ್ರದಲ್ಲಿ ಹಿಂದೆಂದೂ ಕಂಡಿರದಷ್ಟು ಮಳೆಯಾಗಿದೆ. ರಾಯಲ್ಸೀಮಾ ಮುಕ್ಕಾಲು ಭಾಗದಷ್ಟು ಮುಳುಗಿತ್ತು. ತಿರುಪತಿಯ ತಿರುಮಲದಲ್ಲಂತೂ ಪ್ರವಾಹದ ರಭಸಕ್ಕೆ ವಾಹನಗಳೆಲ್ಲ ಕೊಚ್ಚಿಕೊಂಡುಹೋಗಿತ್ತು” ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.
“ನಾಲ್ಕು ಜಿಲ್ಲೆಗಳಲ್ಲಿ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲಾಗಿದೆ. ನಾಲ್ಕು ಜಿಲ್ಲೆಗಳಲ್ಲಿ 19,832 ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸಿಲಾಗಿದೆ ಮತ್ತು 95,949 ಪ್ರವಾಹ ಪೀಡಿತ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಕಾರ್ಯ ನಡೆಯುತ್ತಿದೆ” ಎಂದರು
“ಪ್ರವಾಹ ಪೀಡಿತ ಕುಟುಂಬಗಳಿಗೆ ವಿವಿಧ ವೆಚ್ಚಗಳನ್ನು ಒದಗಿಸಿ, ಶಿಬಿರದಿಂದ ಹೊರಬರುವ ಪ್ರತಿ ಕುಟುಂಬಕ್ಕೆ 2000 ರೂ. ಪರಿಹಾರ ನೀಡಲಾಗುತ್ತಿದೆ. ಪರಿಹಾರ ಶಿಬಿರಗಳಲ್ಲಿ ಅವರಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಜಲಾವೃತಗೊಂಡಿರುವ ಮನೆಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯೂ ಸಹಕರಿಸಿದ್ದಾರೆ” ಎಂದು ಹೇಳಿದರು.
“ರಾಜಂಪೇಟೆಯಲ್ಲಿರುವ 36 ಕೊಳವೆಬಾವಿಗಳ ಮೂಲಕ ನೀರನ್ನು ಸಂಗ್ರಹಿಸಿ ಸರಬರಾಜು ಮಾಡಲಾಗುತ್ತಿದೆ. ಪ್ರವಾಹದಿಂದ ಮೃತಪಟ್ಟವರಿಗೆ ಪರಿಹಾರವನ್ನು ತ್ವರಿತವಾಗಿ ಒದಗಿಸಲಾಗಿದೆ. ಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಎಣಿಕೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ” ಎಂದು ಜಗನ್ ಹೇಳಿದರು.