ಹೊಸ ದಿಗಂತ ವರದಿ, ಮಡಿಕೇರಿ :
ವೀರಾಜಪೇಟೆ ಪಟ್ಟಣ ಪಂಚಾಯ್ತಿಯ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ವಿನಾಂಕ್ ಕುಟ್ಟಪ್ಪ ಅವರು ಆಯ್ಕೆಯಾಗಿದ್ದಾರೆ.
ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ತಹಶೀಲ್ದಾರ್ ಮತ್ತು ಚುನಾವಣಾಧಿಕಾರಿಗಳಾದ ಆರ್. ಯೋಗನಾಂದ ಅವರ ಉಸ್ತುವಾರಿಯಲ್ಲಿ ಮಧ್ಯಾಹ್ನ ಚುನಾವಣಾ ಪ್ರಕ್ರಿಯೆ ನಡೆಯಿತು.
ಪ.ಪಂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ವಿನಾಂಕ್ ಕುಟ್ಟಪ್ಪ ಮತ್ತು ಕಾಂಗ್ರೆಸ್ನಿಂದ ಕೆ.ಹೆಚ್. ಮೊಹಮ್ಮದ್ ರಾಫಿ ನಾಮ ಪತ್ರ ಸಲ್ಲಿಸಿದ್ದರು. ಚುಣಾವಣೆಯಲ್ಲಿ ವಿನಾಂಕ್ ಕುಟ್ಟಪ್ಪ ಪರವಾಗಿ ಸಂಸದ ಪ್ರತಾಪ್ ಸಿಂಹ ಮತ್ತು ವೀರಾಜಪೇಟೆ ವಿಧಾನ ಸಭಾ ಕ್ಷೆತ್ರದ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಒಟ್ಟು 8 ಮಂದಿ ಬಿಜೆಪಿ ಸದಸ್ಯರು ಸೇರಿದಂತೆ ಒಟ್ಟು 10 ಮಂದಿ ಕೈ ಎತ್ತುವ ಮೂಲಕ ಮತ ಚಲಾಯಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ರಾಫಿ ಪರ ಒಬ್ಬ ಪಕ್ಷೇತರ ಸದಸ್ಯರು ಮತ್ತು ಒಬ್ಬ ಜೆ.ಡಿ.ಎಸ್ ಸದಸ್ಯರು ಹಾಗೂ 6 ಮಂದಿ ಕಾಂಗ್ರೆಸ್ ಸದಸ್ಯರು ಸೇರಿದಂತೆ ಒಟ್ಟು 8 ಮಂದಿ ಕೈ ಎತ್ತುವ ಮೂಲಕ ಮತ ಚಲಾಯಿಸಿದರು.
ಸದಸ್ಯರಾದ ಮಂಡೇಪಂಡ ದೇಚಮ್ಮ ಕಾಳಪ್ಪ ಮತ್ತು ಪಕ್ಷೇತರ ಸದಸ್ಯರಾದ ಅಬ್ದುಲ್ ಜಲೀಲ್ ಅವರು ಮತ ಚಲಾಯಿಸದೆ ತಟಸ್ಥವಾಗಿದ್ದರು. ಅಂತಿಮವಾಗಿ ವಿನಾಂಕ್ ಕುಟ್ಟಪ್ಪ ಅವರು 2 ಮತಗಳ ಅಂತರದಿಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಚುನಾವಣಾಧಿಕಾರಿಗಳು ಘೋಷಿಸಿದರು.
ಈ ಹಿಂದೆ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಹರ್ಷವರ್ಧನ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದು ವಿನಾಂಕ್ ಕುಟ್ಟಪ್ಪ ಆಯ್ಕೆಯಾದರು.
ಚುನಾವಣೆಯ ಸಂದರ್ಭ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪಕ್ಷದ ಕಾರ್ಯಕರ್ತರು, ಹಿತೈಷಿಗಳು ನೂತನ ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ ಅವರನ್ನು ಅಭಿನಂದಿಸಿದರು.