ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ಪಕ್ಷಿತಜ್ಞ ಡಾ.ಎಸ್.ವಿ.ನರಸಿಂಹನ್ ಆಯ್ಕೆ

ಹೊಸದಿಗಂತ ವರದಿ ಮಡಿಕೇರಿ:‌ 

ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಜನವರಿ 21 ರಂದು ನಡೆಯಲಿರುವ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕೊಡಗಿನ ಪಕ್ಷಿತಜ್ಞ, ಪರಿಸರ ಬರಹಗಾರ ಡಾ.ಎಸ್.ವಿ ನರಸಿಂಹನ್‌ ಆಯ್ಕೆಯಾಗಿದ್ದಾರೆ.

ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ವೀರಾಜಪೇಟೆಯ ಪುರಭವನದಲ್ಲಿ, ವೀರಾಜಪೇಟೆ ತಾಲೂಕು ಕ.ಸಾ.ಪ ಅಧ್ಯಕ್ಷ ರಾಜೇಶ್‌ ಪದ್ಮನಾಭ ಅಧ್ಯಕ್ಷತೆಯಲ್ಲಿ, ಜಿಲ್ಲಾಧ್ಯಕ್ಷ ಕೇಶವ ಕಾಮತ್ ಉಪಸ್ಥಿತಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಾಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ಮಧೋಶ್ ಪೂವಯ್ಯ ಹಾಗೂ ಸಭೆಯ ಸರ್ವಾನುಮತದ ಒಪ್ಪಿಗೆಯ ಮೂಲಕ ಸಮ್ಮೇಳನ ಅಧ್ಯಕ್ಷರ ಆಯ್ಕೆಯನ್ನು ಮಾಡಲಾಯಿತು.

ವೀರಾಜಪೇಟೆ ತಾಲೂಕಿನ ಆರ್ಜಿ ಮತ್ತು ಬೇಟೋಳಿ ಗ್ರಾಮದಲ್ಲಿ ಈ ಬಾರಿಯ ತಾಲೂಕು ಸಮ್ಮೇಳನ ನಡೆಯಲಿದ್ದು ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಡಾ.ಎಸ್.ವಿ.ನರಸಿಂಹನ್‌ ವಹಿಸಲಿದ್ದಾರೆ. ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಸ್.ವಿ.ನರಸಿಂಹನ್‌ ಮೂಲತಃ ವಿರಾಜಪೇಟೆಯವರೇ ಆಗಿದ್ದು, ಡಾ.ದೇಶಿಕಾಚಾರ್‌ ಹಾಗೂ ಜಾನಕಮ್ಮ ದಂಪತಿಯ ಸುಪುತ್ರ. ವೃತ್ತಿಯಿಂದ ವೈದ್ಯರಾಗಿರುವ ಇವರು ಪ್ರವೃತ್ತಿಯಿಂದ ಪಕ್ಷಿತಜ್ಞ, ಪರಿಸರ ಬರಹಗಾರ, ಖಗೋಳ ವೀಕ್ಷಕರೂ ಹೌದು. ಯಾವುದೇ ಪ್ರಚಾರ ಬಯಸದೆ ತಮ್ಮಷ್ಟಕ್ಕೆ ತಾವು ಪರಿಸರ ಸೇವೆಯನ್ನು ಮಾಡುತ್ತಾ ಅನೇಕ ಪರಿಸರ ಸಂಬಂಧಿತ ಲೇಖನಗಳನ್ನು ಇವರು ಬರೆದಿದ್ದಾರೆ. ಇವರ ಕೂರ್ಗ್‌ ವೈಲ್ಡ್‌ ಲೈಫ್‌ ಸೊಸೈಟಿಯವರು ಪ್ರಕಟ ಮಾಡಿರುವ ‘ಕೊಡಗಿನ ಖಗರತ್ನಗಳು’ (ಫೆದರ್ಡ್‌ ಜ್ಯುವೆಲ್‌ ಆಫ್‌ ಕೂರ್ಗ್‌) ಎನ್ನುವ ಪುಸ್ತಕ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಪ್ರಕಟವಾಗಿದೆ.

ಅಲ್ಲದೆ 2008ರಲ್ಲಿ ಈ ಪುಸ್ತಕದ ಪರಿಷ್ಕೃತ ಆವೃತ್ತಿಯೂ ಹೊರಬಂದಿದ್ದು, ಈ ಪುಸ್ತಕವು ಪಕ್ಷಿಗಳ ಬಗ್ಗೆ ಬರೆದಿರುವ ಅತ್ಯಂತ ಉತ್ತಮವಾದ ಪುಸ್ತಕ ಎಂದು ಎಂ.ವೈ ಘೋರ್ಪಡೆಯವರು ತಮ್ಮ ಪುಸ್ತಕದಲ್ಲಿ ದಾಖಲು ಮಾಡಿರುವುದು ಮತ್ತೊಂದು ವಿಶೇಷ. ಈ ಪುಸ್ತಕ ಲಿಮ್ಕಾ ಬುಕ್‌ ಆಫ್‌ ರೇಕಾರ್ಡ್‌ಗೂ ಸೇರಿದೆ.

ಪ್ರತಿವರ್ಷ ವನ್ಯಜೀವಿ ಸಪ್ತಾಹದಂದು ಇವರೇ ತಮ್ಮ ಕೈಯಾರೆ ಅಂಚೆ ಕಾರ್ಡ್’ನಲ್ಲಿ ಪಕ್ಷಿಯ ಚಿತ್ರ ಬರೆದು ಅದರ ಜೊತೆಗೆ ವನ್ಯಜೀವಿಗೆ ಸಂಬಂಧಿಸಿ ಸಂದೇಶ ಪತ್ರಗಳನ್ನು ಪ್ರತಿವರ್ಷ ಕನ್ನಡದಲ್ಲೇ ಬರೆದು ರಾಜ್ಯದಾದ್ಯಂತ ಹಾಗೂ ವಿದೇಶಕ್ಕೂ ಕಳುಹಿಸುತ್ತಾರೆ.
ಇದುವರೆಗೂ ಸುಮಾರು 75 ಸಾವಿರ ಕಾರ್ಡುಗಳನ್ನು ಕನ್ನಡದಲ್ಲೇ ಬರೆಯುವ ಮೂಲಕ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಿಂದ “ಜೀವಮಾನ ಶ್ರೇಷ್ಠ ಸಾಧನೆಗೂ ಡಾ. ನರಸಿಂಹನ್ ಭಾಜನರಾಗಿದ್ದಾರೆ. ಇದರೊಂದಿಗೆ 2013 ರಲ್ಲಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ. 2013 ರಲ್ಲಿ ಕೊಡಗಿನ ವರ್ಷದ ವ್ಯಕ್ತಿಯಾಗಿಯೂ ಆಯ್ಕೆಯಾಗಿದ್ದ ಇವರ ಅನೇಕ ವೈಜ್ಞಾನಿಕ ಬರಹಗಳು ಸೇರಿದಂತೆ ಪರಿಸರ ಬರಹಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!