ಹೊಸದಿಗಂತ ವರದಿ, ಕಾಸರಗೋಡು:
ಇಂಧನ ಬೆಲೆ ಏರಿಕೆ ವಿರೋಧಿಸಿ ಕೇರಳದ ಮೋಟಾರು ವಾಹನ ವಲಯದ ಕಾರ್ಮಿಕರ ಒಕ್ಕೂಟದ ಆಶ್ರಯದಲ್ಲಿ ರಾಜ್ಯದಲ್ಲಿ ಇಂದು (ಮಂಗಳವಾರ) ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ವರೆಗೆ ವಾಹನ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಬಿಎಂಎಸ್ ಹೊರತುಪಡಿಸಿ ಇತರ ಎಲ್ಲ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿವೆ.
ಪೆಟ್ರೋಲಿಯಂ ದರ ಭಾರೀ ಏರಿಕೆಯಾಗಿದ್ದು , ಇದರಿಂದ ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ ಎಂದು ಟ್ರೇಡ್ ಯೂನಿಯನ್ ಗಳು ಆರೋಪಿಸಿವೆ.
ಆಟೋರಿಕ್ಷಾ, ಟ್ಯಾಕ್ಸಿ ಸಹಿತ ಇತರ ಬಾಡಿಗೆ ವಾಹನಗಳು, ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್ ಗಳು ರಸ್ತೆಗಿಳಿಯಲಿಲ್ಲ. ಆದರೆ ಪತ್ರಿಕೆ, ಹಾಲು ಸಾಗಾಟ, ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ವಾಹನಗಳು, ಮದುವೆ ವಾಹನಗಳು ಇತ್ಯಾದಿಗಳನ್ನು ಮುಷ್ಕರದಿಂದ ಹೊರತುಪಡಿಸಲಾಗಿದೆ. ಈ ಮಧ್ಯೆ ಖಾಸಗಿ ಬೈಕ್, ಕಾರು ಮುಂತಾದವುಗಳು ಸಂಚಾರ ನಡೆಸುತ್ತಿವೆ. ಸಣ್ಣಪುಟ್ಟ ಪ್ರಕರಣಗಳು ಹೊರತುಪಡಿಸಿ ಇದುವರೆಗೆ ಎಲ್ಲಿಯೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.
ಇಂಧನ ಬೆಲೆಯೇರಿಕೆ ವಿರೋಧಿಸಿ ಸಂಯುಕ್ತ ಮುಷ್ಕರ ಸಮಿತಿಯು ಕರೆ ನೀಡಿರುವ 12 ತಾಸುಗಳ ವಾಹನ ಮುಷ್ಕರವು ಕಾಸರಗೋಡು ಜಿಲ್ಲೆಯಲ್ಲಿ ನಡೆಯುತ್ತಿದೆ. ಇದರ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಪ್ರತಿಭಟನಾ ಸಭೆ ನಡೆಯಿತು. ಇಂಧನ ಬೆಲೆಯೇರಿಕೆ ಮತ್ತು ಕೇಂದ್ರ ಸರಕಾರ ಹಾಗೂ ತೈಲ ಕಂಪೆನಿಗಳ ವಿರುದ್ಧ ಜಿಲ್ಲೆಯ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮಂಗಳವಾರ ಬೆಳಗ್ಗೆ ಕೂಡ ಪ್ರತಿಭಟನೆ ಜರಗಿತು.
ಕಾಸರಗೋಡಿನಿಂದ ಮಂಗಳೂರು, ಪುತ್ತೂರು, ಸುಳ್ಯ ಮೊದಲಾದ ಅಂತಾರಾಜ್ಯ ಸರ್ವೀಸ್ ಮತ್ತು ಜಿಲ್ಲೆಯ ಇತರ ಎಲ್ಲ ಕಡೆಗಳಿಗೂ ಬಸ್ ಸಂಚಾರ ನಿಲುಗಡೆಗೊಂಡಿದೆ. ಸಿಐಟಿಯು, ಎಐಟಿಯುಸಿ, ಎಸ್ಟಿಯು, ಐಎನ್ಟಿಯುಸಿ ಸೇರಿದಂತೆ ಪ್ರಮುಖ ಕಾರ್ಮಿಕ ಸಂಘಟನೆಗಳು ಹರತಾಳದಲ್ಲಿ ಪಾಲ್ಗೊಳ್ಳುತ್ತಿವೆ. ಕೆಎಸ್ಆರ್ ಟಿಸಿ ಯೂನಿಯನ್ಗಳು ಹಾಗೂ ಖಾಸಗಿ ಬಸ್ ಕಾರ್ಮಿಕರ ಸಂಘಟನೆಗಳೂ ಮುಷ್ಕರದಲ್ಲಿ ಪಾಲ್ಗೊಂಡಿವೆ.
ಕೇರಳದಲ್ಲಿ ವಾಹನ ಹರತಾಳ ಹಿನ್ನೆಲೆಯಲ್ಲಿ ಇಂದು ನಡೆಸಲುದ್ದೇಶಿಸಿದ್ದ ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವ ವಿದ್ಯಾಲಯದ ಎಲ್ಲ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಕಾಲಡಿ ಸಂಸ್ಕೃತ ವಿಶ್ವ ವಿದ್ಯಾಲಯವು ಇಂದು ನಡೆಸಲುದ್ದೇಶಿಸಿದ್ದ ಎಂಎ ಮ್ಯೂಸಿಯೋಲಜಿ ಪ್ರವೇಶಾತಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಅಲ್ಲದೆ ಮಾರ್ಚ್ 2 ರಂದು ನಡೆಯಬೇಕಾಗಿದ್ದ ಕೇರಳದ ಎಸ್ಎಸ್ಎಲ್ ಸಿ, ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ಮಾದರಿ ಪರೀಕ್ಷೆಗಳನ್ನು ಎಂಟನೇ ದಿನಾಂಕಕ್ಕೆ ಮುಂದೂಡಲಾಗಿದೆ.