ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃಷ್ಣನೂರು ಉಡುಪಿಯ ಕೀರ್ತಿ ದೂರದ ಅಮೆರಿಕದಲ್ಲಿ ಇನ್ನಷ್ಟು ಹೆಚ್ಚಳವಾಗಿದೆ.
ಅಮೆರಿಕದ ಸಿಯಾಟಲ್ ನಗರದಲ್ಲಿ ‘ವೆಂಕಟಕೃಷ್ಣ ವೃಂದಾವನ’ ಎಂಬ ಹೆಸರಿನಲ್ಲಿ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಮಠದ 9ನೇ ಶಾಖೆಯನ್ನು ಶನಿವಾರ ಲೋಕಾರ್ಪಣೆಗೊಳಿಸಿದ್ದಾರೆ.
ಅಮೆರಿಕದ ಸಹ್ಯಾದ್ರಿ ಕನ್ನಡ ಸಂಘದ ಸದಸ್ಯರು, ಇತರ ಭಾರತೀಯ ಸಂಘಟನೆಗಳು ಮತ್ತು ಭಕ್ತರು ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರು.
ಈ ಮೂಲಕ ಸಿಯಾಟಲ್ ನಗರದ ಕೃಷ್ಣ ಭಕ್ತರ 5 ವರ್ಷದ ಕನಸು ಕಡೆಗೂ ನನಸಾದಂತಾಗಿದೆ. ಈ ವೆಂಕಟಕೃಷ್ಣ ವೃಂದಾವನವು ಪ್ರಸ್ತುತ ಅರ್ಚಕರೊಬ್ಬರ ಮನೆಯಲ್ಲಿ ಕಾರ್ಯಾರಂಭಗೊಂಡಿದೆ. ಶ್ರೀಗಳ ಮಠದ ಇಬ್ಬರು ಶಿಷ್ಯರು ಇಲ್ಲಿ ಪೂಜೆ ಮತ್ತು ಪೌರೋಹಿತ್ಯಾದಿ ಸೇವೆಗಳನ್ನು ನಿರ್ವಹಿಸಲು ಉಪಸ್ಥಿತರಿರುತ್ತಾರೆ ಎಂದು ಶ್ರೀಗಳ ಸಾಗರೋತ್ತರ ಸಂಯೋಜಕ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.