- ಮೇಘನಾ ಶೆಟ್ಟಿ, ಶಿವಮೊಗ್ಗ
ಎಷ್ಟೋ ಬಾರಿ ಈ ಸಂದರ್ಭ ನಮಗೆ ಬಂದಿದೆ. ಹೋಟೆಲ್ನಲ್ಲಿ ಚೆನ್ನಾಗಿ ತಿಂದು ನಂತರ ಪರ್ಸ್ ಮರೆತು ಬಂದದ್ದು, ಬೇಕಾದಷ್ಟು ದುಡ್ಡು ಇಲ್ಲದಿದ್ದದ್ದು!
ಈಗೆಲ್ಲಾ ಪರ್ಸ್ ಬಿಟ್ಟು ಹೋದರೂ ಫೋನ್ ಬಿಟ್ಟು ಹೋಗೋ ಚಾನ್ಸ್ ಇಲ್ಲ, ಮೊಬೈಲ್ನಲ್ಲೇ ಪೇಮೆಂಟ್ ಮಾಡುತ್ತೇವೆ. ಆದರೆ ಹಿಂದೆ ಹಾಗಿರಲಿಲ್ಲ, ಹೋಟೆಲ್ನಲ್ಲಿ ಹಿಟ್ಟು ರುಬ್ಬೋದು, ಪಾತ್ರೆ ತೊಳಿಯೋದನ್ನು ಸಿನಿಮಾಗಳಲ್ಲಿ ನೋಡಿದ್ದೇವೆ.
ಆದರೆ ನೀವು ಈ ಹೋಟೆಲ್ಗೆ ಹೋದರೆ ತಿಂದ ಮೇಲೆ ಬಿಲ್ ಕೊಡಬೇಕಾಗಿಲ್ಲ. ನಿಮ್ಮ ಬಿಲ್ನ್ನು ಬೇರೆ ಯಾರೋ ಗಿಫ್ಟ್ ರೀತಿ ಕೊಟ್ಟಿರುತ್ತಾರೆ. ಹಾಗಂತ ಊಟ ಮಾಡಿ ಏನೂ ಹಣ ನೀಡದೇ ಬಂದುಬಿಡಬೇಡಿ, ನಿಮಗೆ ಅನಿಸಿದ್ದಷ್ಟು ಹಣವನ್ನು ಎನ್ವಲಪ್ ಒಂದರಲ್ಲಿ ಹಾಕಿಟ್ಟು ಬನ್ನಿ…
ಹೌದು, ಇದು ಸುಮ್ಮನೆ ಒಂದು ಕಾನ್ಸೆಪ್ಟ್ ಅಲ್ಲ, ಅಹಮದಾಬಾದ್ನಲ್ಲಿರುವ ‘ಸೇವಾ ಕೆಫೆ’ ನಡೆಯೋದೆ ಹೀಗೆ!
ಗಿಫ್ಟ್ ಎಕಾನಮಿ ಪದ್ಧತಿ ರೂಡಿ ಮಾಡಿಕೊಂಡಿರುವ ಸೇವಾ ಕೆಫೆಯಲ್ಲಿ ಯಾವುದೇ ಆಹಾರಕ್ಕೆ ಇಂತಿಷ್ಟೇ ದುಡ್ಡು ಅಂತಿಲ್ಲ. ನಿಮಗಿಷ್ಟದ್ದನ್ನು ಆರ್ಡರ್ ಮಾಡಿ, ತಿನ್ನಿ, ನಿಮ್ಮ ಮನಸ್ಸಿಗೆ ಎಷ್ಟು ಅನಿಸುತ್ತದೋ ಅಷ್ಟು ಹಣ ನೀಡಿ. ನೀವು ತಿಂದನ್ನು ಇನ್ಯಾರೋ ನಿಮಗೆ ಕೊಟ್ಟ ಗಿಫ್ಟ್, ನೀವು ಈಗ ಕೊಡುವ ಹಣ ಮುಂದೆ ಯಾರದ್ದೋ ಊಟದ ಗಿಫ್ಟ್!
ಈ ರೀತಿ ಬ್ಯುಸಿನೆಸ್ ಮಾಡೋಕೆ ಸಾಧ್ಯನಾ? ಸಾವಿರ ರೂ.ವರೆಗೂ ತಿಂದು ಇನ್ನೂರು ರೂ. ಇಟ್ಟು ಹೋದರೆ? ಲಾಸ್ ಆಗೋದಿಲ್ವಾ? ಈ ಪ್ರಶ್ನೆಗಳು ಎಲ್ಲರಿಗೂ ಬಂದಿದೆ. ಆದರೆ ಈವರೆಗೂ ಸೇವಾ ಕೆಫೆಗೆ ಲಾಸ್ ಆಗಿಯೇ ಇಲ್ಲ. ಕೆಲವರು ಕಮ್ಮಿ ಹಣ ಇಟ್ಟರೆ, ಹಲವರು ತಿಂದದ್ದಕ್ಕಿಂತ ಹೆಚ್ಚೇ ಇಟ್ಟು ಹೋಗುತ್ತಾರೆ.
ಇಷ್ಟೇ ಅಲ್ಲದೆ ಸೇವಾ ಕೆಫೆಗೆ ಗ್ರಾಮ್ ಸೇವಾ, ಮಾನವ್ ಸದನ್ನಂತಹ ಎನ್ಜಿಒಗಳ ಸಪೋರ್ಟ್ ಕೂಡ ಇದೆ. ಇದರಿಂದಾಗ ಕೆಫೆ ನಡೆಸೋದು ಕಷ್ಟವಾಗಿಲ್ಲ. 11 ವರ್ಷಗಳಿಂದ ಈ ಕೆಫೆ ನಡೆಯುತ್ತಿದ್ದು, ಫ್ಯೂಚರ್ ಎಕಾನಮಿ ಸಿಸ್ಟಮ್ ಗಿಫ್ಟ್ ಎಕಾನಮಿಯನ್ನು ಪ್ರತಿಪಾದಿಸುತ್ತಿದೆ.
ಗಿಫ್ಟ್ ಎಕಾನಮಿ ಎಂದರೇನು?
ನೀವು ರೆಸ್ಟಾರೆಂಟ್ಗೆ ಹೋಗಿ ಇಷ್ಟದ ಊಟ ಆರ್ಡರ್ ಮಾಡಿ ತಿಂದು ವಾಪಾಸಾಗುವ ಬಿಲ್ ಕೊಡಬೇಕಾಗಿಲ್ಲ. ಏಕೆಂದರೆ ಇದಕ್ಕಿಂತ ಮುಂಚೆಯೇ ನಿಮ್ಮ ಬಿಲ್ ಬೇರೆಯವರು ಕೊಟ್ಟು, ನಿಮಗೆ ಗಿಫ್ಟ್ ನೀಡಿರುತ್ತಾರೆ. ನೀವು ಮತ್ತೊಬ್ಬರಿಗೆ ನೀಡಬಹುದು.
ಇಲ್ಲಿ ಶೆಫ್ಗಳೇ ಇಲ್ಲ
ಶೆಫ್ ಇಲ್ಲದೆ ಅದ್ಯಾವ ಅಡುಗೆ ಮನೆ ಎಂದು ನೀವು ಅಂದುಕೊಳ್ಳಬಹುದು, ಇಲ್ಲಿ ಅಡುಗೆ ಮಾಡುವವರೆಲ್ಲರೂ ವಾಲೆಂಟಿಯರ್ಸ್. ಇಷ್ಟ ಪಟ್ಟು ಜನರಿಗೆ ತಮ್ಮ ಕೈ ರುಚಿ ತೋರಿಸಬೇಕು ಎಂದು ಆಶಿಸಿ ಅವರೇ ಬಂದು ಅಡುಗೆ ಮಾಡುತ್ತಾರೆ.
ಬಂದ, ತಿಂದ, ಹೋದ…
ದುಡ್ಡು ಕೊಡೋದಿಲ್ಲ ಎಂದಮೇಲೆ ಚೆನ್ನಾಗಿ ತಿಂದು ಹೋಗಬಹುದು, ಯಾರು ಯಾಕೆ ದುಡ್ಡು ಇಟ್ಟಿಲ್ಲ ಎಂದು ಕೇಳುವುದೇ ಇಲ್ಲ. ಈ ಮನಸ್ಥಿತಿ ಬಂದು ಚೇರ್ಮೇಲೆ ಕುಳಿತುಕೊಳ್ಳುವವರೆಗೂ ಇರಬಹುದು. ಆದರೆ ಒಂದು ಬಾರಿ ಪ್ರೀತಿಯಿಂದ ಉಣಬಡಿಸಿದ ಊಟ ತಿಂದಮೇಲೆ ಖಾಲಿ ಎನ್ವಾಲಪ್ ಇಟ್ಟು ಹೋಗೋದಕ್ಕೆ ಮನಸ್ಸು ಬರೋದಿಲ್ಲ.
MOVE BY LOVE
ಇಲ್ಲಿಯ ಸ್ವಯಂಸೇವಕರು ಅವರನ್ನು ಮೂವ್ ಬೈ ಲವ್ ಗ್ರೂಪ್ ಎಂದೇ ಕರೆದುಕೊಳ್ಳುತ್ತಾರೆ. ಫ್ರೀ ಊಟ ಎಂದು ಬಂದು ಇಲ್ಲಿನ ಪ್ರೀತಿ ಕಂಡು ಮನಸ್ಸು ಕರಗಿ ಹೆಚ್ಚು ದುಡ್ಡು ಇಟ್ಟು, ಮುಂದಿನ ಬಾರಿಯಿಂದ ಇಲ್ಲಿಯೇ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ.
ಯಾವಾಗ ಓಪನ್?
ಸೇವಾ ಕೆಫೆ ವಾರದಲ್ಲಿ ಒಂದು ದಿನ ಮಾತ್ರ ತೆರೆದಿರುತ್ತದೆ. ಪ್ರತಿ ಗುರುವಾರ ಸಂಜೆ 7 ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ತೆರೆದಿರುತ್ತದೆ. 50 ಮಂದಿ ಬರುವವರೆಗೂ ಕೆಫೆ ತೆಗೆದಿರುತ್ತದೆ. ತಿಂಗಳ ಅಂತ್ಯಕ್ಕೆ ಎಷ್ಟು ಹಣ ಬಂದಿದೆ ಎಂದು ಎಣಿಸಿ, ಲಾಭವನ್ನು ಚಾರಿಟಿಗೆ ನೀಡಲಾಗುತ್ತದೆ.
ನೀವು ಸೇವೆ ಮಾಡಬಹುದು
ನಿಮ್ಮ ಕೈ ರುಚಿಯನ್ನು ಇನ್ನೊಬ್ಬರಿಗೆ ತೋರಿಸಬೇಕು, ಚೆನ್ನಾಗಿ ಪಾತ್ರೆ ತೊಳೆಯುತ್ತೇನೆ, ಸರ್ವ್ ಮಾಡೋಕೆ ಇಷ್ಟ ಎನ್ನುವವರು ಸ್ವಯಂಸೇವಕರಾಗಿ ಸೇವಾ ಕೆಫೆಗೆ ಹೋಗಬಹುದು. ಇಲ್ಲಿ ವಿದ್ಯಾರ್ಥಿಗಳು, ಗೃಹಿಣಿಯರು, ಶೆಫ್ಗಳು ಕೂಡ ಸೇವೆ ಮಾಡುತ್ತಾರೆ.
ಗಿಫ್ಟ್ ಎಕಾನಮಿ ಆಟೋ
ಇದೇ ಕಾನ್ಸೆಪ್ಟ್ನಲ್ಲಿ ಅಹಮದಾಬಾದ್ನ ಉದಯ್ ಆಟೋ ಓಡಿಸುತ್ತಾರೆ. ಆಟೋದಲ್ಲಿ ಪ್ರಯಾಣಿಕರ ಡೆಸ್ಟಿನೇಶನ್ಗೆ ಬಿಟ್ಟ ನಂತರ ಖಾಲಿ ಎನ್ವಾಲಪ್ ನೀಡುತ್ತಾರೆ. ಆಟೋ ಒಳಗೆ ನೀರು, ಸ್ನಾಕ್ಸ್, ಪುಸ್ತಕ, ಮ್ಯಾಗಜೀನ್ ಕೂಡ ಇದೆ.
ಎಂದಾದರೂ ಅಹಮದಾಬಾದ್ ತೆರಳಿದರೆ ಉದಯ್ ಭಾಯ್ ಆಟೋದಲ್ಲಿ ಕುಳಿತು ಸೇವಾ ಕೆಫೆಗೆ ಭೇಟಿ ನೀಡಿ. ನಿಸ್ವಾರ್ಥದಿಂದ ಎಲ್ಲರನ್ನೂ ತಮ್ಮವರೆಂದು ನೋಡಿ ಅಡುಗೆ ಮಾಡಿ ಬಡಿಸುವ ಶೆಫ್ಗಳು, ತಮ್ಮ ಮನೆಯ ಪಾತ್ರೆ ತೊಳೆಯಲು ಇಷ್ಟಪಡದ ಈ ಕಾಲದಲ್ಲಿ ಕೆಫೆಯ ಎಲ್ಲಾ ಪಾತ್ರೆ ತೊಳೆವ ವಾಲೆಂಟಿಯರ್ಸ್, ಪ್ರೀತಿಯಿಂದ ಸರ್ವ್ ಮಾಡಿ ನಕ್ಕು ಬರುವ ಸರ್ವಿಂಗ್ ವಾಲೆಂಟಿಯರ್ಸ್ ಹಾಗೂ ಗಿಫ್ಟ್ ಎಕಾನಮಿ ಕಾನ್ಸೆಪ್ಟ್ಗೆ ನಮ್ಮ ಚಪ್ಪಾಳೆ!