ಹೊಸದಿಗಂತ ವರದಿ, ಕೊಡಗು:
ಅತ್ಯಂತ ಜನಸ್ನೇಹಿ ಠಾಣೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಮಡಿಕೇರಿ ಮಹಿಳಾ ಪೊಲೀಸ್ ಠಾಣೆ ಕಿರಿದಾಗಿದ್ದು, ತಕ್ಷಣ ಇದನ್ನು ಸೂಕ್ತ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂದು ಕೊಡಗು ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಅವರು, ಮಹಿಳಾ ಠಾಣೆಯನ್ನು ಪೊಲೀಸ್ ವಸತಿಗೃಹದ ಎರಡು ಕೋಣೆಯ ಒಂದು ಮನೆಯಲ್ಲಿ ನಡೆಸಲಾಗುತ್ತಿದ್ದು, ಇದರಿಂದ ಪೊಲೀಸ್ ಸಿಬ್ಬಂದಿಗಳಿಗೆ ಮಾತ್ರವಲ್ಲದೆ ದೂರುದಾರರಿಗೂ ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ ಎಂದು ಗಮನ ಸೆಳೆದಿದ್ದಾರೆ.
ಕೇವಲ ಎರಡು ಕೋಣೆಯ ಠಾಣೆಯಲ್ಲಿ ಸುಮಾರು 29 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕಾಗಿದೆ. ಅಲ್ಲದೆ ಪ್ರತಿದಿನ ದೂರುದಾರರು ಬರುತ್ತಿದ್ದು, ಠಾಣೆ ಉಸಿರುಗಟ್ಟಿಸುವ ವಾತಾವರಣದಲ್ಲಿದೆ ಎಂದು ತಿಳಿಸಿದ್ದಾರೆ.
ನಗರದ ಹೊರ ಭಾಗದಲ್ಲಿ ಠಾಣೆ ಇರುವುದರಿಂದ ಸಿಬ್ಬಂದಿಗಳು ಹಾಗೂ ದೂರುದಾರರು ತಲುಪಲು ಆಟೋ ರಿಕ್ಷಾವನ್ನೇ ಅವಲಂಬಿಸಬೇಕಾಗಿದೆ. ಅಲ್ಲದೆ ನಗರ ವ್ಯಾಪ್ತಿಯಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ತಕ್ಷಣ ಸ್ಪಂದಿಸಲು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲವೆಂದು ಅಭಿಪ್ರಾಯಪಟ್ಟಿರುವ ಪವನ್ ಪೆಮ್ಮಯ್ಯ, ಈ ಹಿಂದೆ ನಗರ ಠಾಣೆಯಿದ್ದ ಪ್ರದೇಶದಲ್ಲೇ ಮಹಿಳಾ ಪೊಲೀಸ್ ಠಾಣೆಯನ್ನು ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.