Thursday, June 30, 2022

Latest Posts

ಸಾಮೂಹಿಕ ಪರಿಶ್ರಮದಿಂದ ಗೆಲುವು: ಪರಿಷತ್ ನೂತನ ಸದಸ್ಯ ಕೆ.ಎಸ್.ನವೀನ್

ಹೊಸದಿಗಂತ ವರದಿ,ಚಿತ್ರದುರ್ಗ:

ಚುನಾವಣೆ ಘೋಷಣೆಯಾದ ಮೊದಲ ದಿನದಿಂದ ಯೋಜಿತ ರೀತಿಯಲ್ಲಿ ಕೆಲಸ ಮಾಡಿದ ಪರಿಣಾಮ ಚುನಾವಣೆಯಲ್ಲಿ ಜಯ ಲಭಿಸಿತು ಎಂದು ವಿಧಾನ ಪರಿಷತ್ ನೂತನ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.
ನಗರದ ಐಶ್ವರ್ಯ ಫೋರ್ಟ್ ಹೊಟೇಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿದಂತೆ ಎರಡು ಜಿಲ್ಲೆಗಳ ಸಚಿವರು, ಸಂಸದರು, ಶಾಸಕರು ಸೇರಿದಂತೆ ಎಲ್ಲರೂ ಮೂರು ತಂಡಗಳನ್ನು ಮಾಡಿಕೊಂಡು ಸ್ಥಳೀಯ ಸಂಸ್ಥೆಗಳ ಸದಸ್ಯರ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದೆವು. ೫೦-೭೦ ಸದಸ್ಯರನ್ನು ಸೇರಿಸಿ ಚಿಕ್ಕ ಚಿಕ್ಕ ಸಭೆಗಳನ್ನು ಮಾಡಿದೆವು. ೧೧ ಜಿ.ಪಂ. ಕ್ಷೇತ್ರಗಳಲ್ಲಿ ಸಭೆ ನಡೆಸಲಾಯಿತು ಎಂದರು.
ಸುಮಾರು ೫೦೬೬ ಸದಸ್ಯರಿಗೆ ಅಂಚೆ ಮೂಲಕ ನಮ್ಮ ಪ್ರಣಾಳಿಕೆ, ಗ್ರಾ.ಪಂ. ಸದಸ್ಯರ ಕೈಪಿಡಿ ಹಾಗೂ ಮನವಿ ಪತ್ರಗಳನ್ನು ಕಳಿಸಕೊಡಲಾಗಿತ್ತು. ಇದನ್ನು ಓದಿ ತಿಳಿದ ಮತದಾರರು ನನ್ನನ್ನು ಬೆಂಬಲಿಸಿದ್ದಾರೆ. ಇನ್ನೂ ಬಹುತೇಖ ಸದಸ್ಯರಿಗೆ ಶಿಕ್ಷಣದ ಕೊರತೆ ಇದೆ. ಹಾಗಾಗಿ ಗ್ರಾ.ಪಂ. ಸದಸ್ಯರ ಸಬಲೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಧ್ಯಾಹ್ನ ೩ ಗಂಟೆವರೆಗೆ ಮತ ಚಲಾವಣೆಯಾಗದಿರುವ ಬಗ್ಗೆ ಚುನಾವಣಾ ಆಯೋಗದ ಅಧಿಕಾರಿ ಪ್ರಶ್ನೆ ಮಾಡಿದರು. ಜಿಲ್ಲೆಯ ಪಾಳಿಗೆ ಇದೊಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿದ್ದು, ಅದರ ನಿವಾರಣೆ ಮಾಡಲಾಗುವುದು ಎಂದು ಹೇಳಿದರು.
ಗ್ರಾ.ಪಂ. ಸದಸ್ಯರನ್ನು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಮಾತನಾಡಿಸುವುದಲ್ಲ. ಅವರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ಅಭಿವೃದ್ಧಿ ಕೆಲಸಗಳನ್ನು ಮಾಡಿಸಬೇಕು. ಈ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾ.ಪಂ. ಸದಸ್ಯರು ಹಾಗೂ ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಯಾವುದೇ ಕುಂದುಕೊರತೆಗಳಿದ್ದಲ್ಲಿ ತಾ.ಪಂ. ಇಒ, ಜಿ.ಪಂ. ಸಿಇಒ ಜೊತೆ ಮಾತುಕತೆ ನಡೆಸಿ ನಿವಾರಿಸಲಾಗುವುದು ಎಂದು ತಿಳಿಸಿದರು.
ಪ್ರತಿ ಗ್ರಾ.ಪಂ. ೧೦ ಸಾವಿರ ಚದರಡಿ ಅಳತೆಯ ಸ್ವಂತ ಕಟ್ಟಡ, ಮಹಿಳಾ ಸದಸ್ಯರಿಗೆ ವಿಶ್ರಾಂತಿ ಕೊಠಡಿ, ಕಚೇರಿಗೆ ಬರುವ ನಾಗರೀಕರಿಗೆ ವಿಶ್ರಾಂತಿ ಕೊಠಡಿ, ಅಲ್ಲಿನ ಯುವಜನರಿಗೆ, ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಗ್ರಂಥಾಲಯ ನಿರ್ಮಾಣ ಮಾಡಲಾಗುವುದು. ಸದಸ್ಯರಿಗೆ ಗೌರವಧನ ಹೆಚ್ಚಳ, ಅಧ್ಯಕ್ಷರಿಗೆ ಸರ್ಕಾರಿ ವಾಹನ ವ್ಯವಸ್ಥೆ ಮಾಡುವ ಉದ್ದೇಶವಿದೆ. ಪ್ರತಿ ಗ್ರಾ.ಪಂ.ಗಳಲ್ಲಿ ಎಲ್‌ಇಡಿ ವ್ಯವಸ್ಥೆ ಮಾಡಿ ಅದರಲ್ಲಿ ಮಳೆ, ಬೆಳೆ, ಬೆಳೆಗಳ ದರಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.
ಗ್ರಾ,ಪಂ.ಗಳ ನಡುವೆ ಅಭಿವೃದ್ಧಿ ಕುರಿತು ಆರೋಗ್ಯಕರ ಸ್ಪರ್ಧೆ ಏರ್ಪಡಿಸಲಾಗುವುದು. ಅಭಿವೃದ್ಧಿ ಸಾಧಿಸಿದ ಪಂಚಾಯಿತಿಗಳಿಗೆ ಬಹುಮಾನ, ಪ್ರವಾಸದ ವ್ಯವಸ್ಥೆ ಮಾಡುವುದು. ವಾರ್ಷಿಕೋತ್ಸವ ಮಾಡುವ ಮೂಲಕ ಸದಸ್ಯರನ್ನು ಒಂದೆಡೆ ಸೇರಿಸಿ ಉತ್ತಮ ಬಾಂಧವ್ಯ ಬೆಸೆಯಲಾಗುವುದು. ಸದಸ್ಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಚುನಾವಣಾ ವೆಚ್ಚಗಳನ್ನು ಕಡಿಮೆ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಮಾಧ್ಯಮ ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಹಿರಿಯೂರಿನ ರಾಘಣ್ಣ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss