ಹೊಸ ದಿಗಂತ ವರದಿ, ಶಿವಮೊಗ್ಗ :
ಇಲ್ಲಿನ ಕೇಂದ್ರ ಕಾರಾಗೃಹದ ವಾರ್ಡನ್ ಪತ್ನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹೊಸೂರಿನ ಅಸ್ಪಾಕ್ ಟಗರಿ (24) ಆತ್ಮಹತ್ಯೆ ಮಾಡಿಕೊಂಡ ಜೈಲ್ ವಾರ್ಡನ್. ಕೌಟುಂಬಿಕ ಕಲಹದಿಂದಾಗಿ ಈತ ಆತ್ಮಹತ್ಯೆಕೊಂಡಿರುವುದಾಗಿ ತಿಳಿದು ಬಂದಿದೆ.
ಮಾಬಾಬು ದಸ್ತಾಗಿರ್ ಟಗರಿ ಮತ್ತು ದುಲ್ಲಾನಬಿ ದಂಪತಿ ಮೂವರು ಮಕ್ಕಳಲ್ಲಿ ಆಸ್ಪಾಕ್ ಕೊನೆಯನವನಾಗಿದ್ದು ಅಕ್ಕ ಮತ್ತು ಅಣ್ಣನಿದ್ದಾನೆ. ಬೆಂಗಳೂರಿನ ಕೆಎಸ್ಆರ್ಪಿಯಲ್ಲಿ ಪೇದೆಯಾಗಿದ್ದ ಅಸ್ಪಾಕ್ ಕಳೆದೆರಡು ವರ್ಷಗಳಿಂದ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದರು. ಹುಕ್ಕೇರಿ ತಾಲೂಕಿನ ಯುವತಿಯೊಂದಿಗೆ ಅಸ್ಪಾಕ್ ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ದಂಪತಿಗೆ 20 ದಿನದ ಹೆಣ್ಣು ಮಗುವಿದೆ. ಆದರೆ ದಾಂಪತ್ಯದಲ್ಲಿ ಮನಸ್ತಾಪ ಉಂಟಾಗಿದ್ದು, ಜಗಳ ಮಾಡಿಕೊಂಡು ಪತ್ನಿ ತವರು ಮನೆ ಸೇರಿದ್ದಳು. ಬುಧವಾರ ರಾತ್ರಿ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದ ಅಸ್ಪಾಕ್ ಮಾತನಾಡಿದ್ದರು. ಆ ಸಂದರ್ಭದಲ್ಲಿ ಅತ್ತೆ-ಮಾವನ ಜತೆ ಜಗಳ ಮಾಡಿದ್ದರು. ವಿಡಿಯೋ ಕಾಲ್ನಲ್ಲಿಯೇ ಜಗಳ ಜೋರಾಗಿ ನಡೆದಿದೆ. ಹತಾಶಗೊಂಡ ಅಸ್ಪಾಕ್ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದರು ಎನ್ನಲಾಗಿದೆ.
ಕಿಟಕಿ ಬಳಿ ಮೊಬೈಲ್ ಇಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ದೃಷ್ಯವನ್ನು ಲೈವ್ ಆಗಿ ಪತ್ನಿ, ಅತ್ತೆ ಮಾವನಿಗೆ ತೋರಿಸಿದ್ದಾರೆ. ಇದರಿಂದ ಆತಂಕಗೊಂಡ ಪತ್ನಿ ತಕ್ಷಣ ಜೈಲು ಅಧೀಕ್ಷಕರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣ ವಸತಿ ಗೃಹದಲ್ಲಿದ್ದ ಇತರೆ ಸಿಬ್ಬಂದಿ ಮನೆ ಬಾಗಿಲು ಒಡೆದು ಹೋಗುವಷ್ಟರಲ್ಲಿ ಅಸ್ಪಾಕ್ ಮೃತಪಟ್ಟಿದ್ದರು.
ಪತಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಲೈವ್ ಆಗಿ ನೋಡಿದ ಪತ್ನಿ ಆಘಾತಕ್ಕೊಳಗಾಗಿದ್ದಾರೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.