ಸದಾ ಕಲಾತ್ಮಕ ಚಟುವಟಿಕೆಗಳಿಂದ ಕೂಡಿರುತ್ತಿದ್ದ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತು, ನಿನ್ನೆಯಿಂದ ಭಾವನಾತ್ಮಕ ಸನ್ನಿವೇಶಕ್ಕೂ ಆಗುತ್ತಿದೆ ಸಾಕ್ಷಿ. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಪೊಲೀಸರ ಭಾವಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಅವರ ನೆನಪನ್ನು ಅಮರವಾಗಿಸಲಾಗುತ್ತಿದೆ.
ಸಾಮಾನ್ಯರು ತಮ್ಮ ಅಸಾಮಾನ್ಯ ತ್ಯಾಗ, ಬಲಿದಾನಗಳಿಂದ ಅಮರವೀರರಾಗುತ್ತಾರೆ. ಪೊಲೀಸರು ಆಂತರಿಕ ಭದ್ರತೆ ಕಾಯ್ದುಕೊಳ್ಳಲು ಹಗಲು ರಾತ್ರಿ ಎನ್ನದೇ ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ದಿನದ 24 ತಾಸು, ವರ್ಷದ 365 ದಿನಗಳೂ ಕರ್ತವ್ಯ ನಿರ್ವಹಿಸುತ್ತಾರೆ. ಅದರೊಂದಿಗೆ ಎರಡು ವರ್ಷಗಳಿಂದ ಕೋವಿಡ್-19 ನಿಯಂತ್ರಣಕ್ಕೂ ಮುಂಚೂಣಿಯಲ್ಲಿದ್ದು ಕಾರ್ಯನಿರತರಾಗಿದ್ದಾರೆ.
ಈ ಹೋರಾಟದಲ್ಲಿ ರಾಜ್ಯದಲ್ಲಿ ಒಟ್ಟು 101 ಪೊಲೀಸ್ ಅಧಿಕಾರಿ ಸಿಬ್ಬಂದಿ ಪ್ರಾಣ ತೆತ್ತಿದ್ದಾರೆ. ಇತರೆ ಪೊಲೀಸ್ ಕರ್ತವ್ಯ ನಿರ್ವಹಣೆ ವೇಳೆ 16 ಮಂದಿ ಹುತಾತ್ಮರಾಗಿದ್ದಾರೆ. ಈ ಎಲ್ಲ ಅಮರ ವೀರರ ಸ್ಮರಣೆಗಾಗಿ ಕರ್ನಾಟಕ ರಾಜ್ಯ ಪೊಲೀಸ್ ‘ಸ್ಮರಣಾಂಜಲಿ’ ಕಾರ್ಯಕ್ರಮ ಏರ್ಪಡಿಸಿದೆ. ಅಕ್ಟೋಬರ್ 24ರವರೆಗೆ ಈ ಪ್ರದರ್ಶನವಿದೆ.
ಪ್ರತಿಯೊಬ್ಬರ ಭಾವಚಿತ್ರವನ್ನು ಪ್ರದರ್ಶಿಸಿ, ಹುತಾತ್ಮರಿಗೆ ಕೃತಜ್ಞತಾ ಪೂರ್ವಕ ನಮನಗಳನ್ನು ಸಲ್ಲಿಸಲಾಗುತ್ತಿದೆ. ಬೆಂಗಳೂರು, ಹಾಸನ, ಉತ್ತರ ಕನ್ನಡ, ಬೆಳಗಾವಿ, ಶಿವಮೊಗ್ಗ, ತುಮಕೂರು… ಹೀಗೆ ರಾಜ್ಯಾದ್ಯಂತ ಹುತಾತ್ಮರಾದ ಈ ಎಲ್ಲ ಅಮರ ವೀರರಿಗೆ ಹೃದಯ ಪೂರ್ವಕ ಸ್ಮರಣಾಂಜಲಿ.