Thursday, August 11, 2022

Latest Posts

ಜಾಗರಣೆ ನೆಪದಲ್ಲಿ ಸಿನಿಮಾ ನೋಡದೆ ಶಿವನ ಸ್ಮರಣೆ ಮಾಡಬೇಕು: ಡಾ. ಪಂಡಿತಾರಾಧ್ಯ ಶ್ರೀ

ಹೊಸ ದಿಗಂತ ವರದಿ, ಚಿತ್ರದುರ್ಗ:

ಶಿವರಾತ್ರಿ ಸಿನಿಮಾ ರಾತ್ರಿಯಾಗದೆ ನಿಜವಾದ ಅರ್ಥದಲ್ಲಿ ಶಿವನ ಆರಾಧನೆ ಮಾಡುವ ಮೂಲಕ ಅರ್ಥಪೂರ್ಣ ಶಿವರಾತ್ರಿ ಆಚರಣೆಯಾಗಬೇಕಿದೆ ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ ಶಿವರಾತ್ರಿ ಮಹೋತ್ಸವದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು, ಶಿವನ ನಾಮಸ್ಮರಣೆ ಮಾಡುತ್ತಾ ಶಿವರಾತ್ರಿ ಕಳೆಯಬೇಕು. ಉತ್ತಮ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನ ಹೆಚ್ಚಿಸುವ ಕಾರ್ಯವನ್ನು ಈ ಪುಣ್ಯದ ದಿನ ಮಾಡಬೇಕೆಂದು ಕರೆ ನೀಡಿದರು.
ಶಿವರಾತ್ರಿ ದಿನದಂದು ಎಚ್ಚರವಾಗಿ ಇರಬೇಕೆಂದು ೨-೩ ಸಿನಿಮಾಗಳನ್ನು ನೋಡುವುದು ಅಥವಾ ಕ್ಲಬ್‌ಗೆ ಹೋಗಿ ಶಿವರಾತ್ರಿ ಕಳೆಯಬಾರದು. ನಿಜವಾದ ಅರ್ಥದಲ್ಲಿ ಶಿವನ ಸ್ಮರಣೆ, ಆರಾಧನೆ ಮಾಡುತ್ತಾ, ಉತ್ತಮ ಗ್ರಂಥಗಳನ್ನು ಓದುತ್ತಾ, ಎಷ್ಟು ಸಮಯ ಎಚ್ಚರವಾಗಿರಲು ಸಾಧ್ಯವೋ ಅಷ್ಟು ಎಚ್ಚರವಾಗಿದ್ದು, ನಂತರ ಮಲಗಬೇಕು. ಅದನ್ನು ಬಿಟ್ಟು ಜಾಗರಣೆ ಹೆಸರಿನಲ್ಲಿ ಬೇರೆ ಕೆಲಸ ಮಾಡುವುದು ಸರಿಯಲ್ಲ ಭಕ್ತ ಸಮೂಹಕ್ಕೆ ಕಿವಿಮಾತು ಹೇಳಿದರು.
ಶಿವರಾತ್ರಿಯಂದು ಉಪವಾಸ ಮಾಡುವ ಪದ್ಧತಿಯಿದೆ. ಆದರೆ ನಿಜ ಅರ್ಥದಲ್ಲಿ ಉಪ ಎಂದರೆ ಹತ್ತಿರ, ವಾಸ ಎಂದರೆ ಇರುವುದು. ಶಿವನ ಹತ್ತಿರ ಇರುವುದೇ ಉಪವಾಸ. ಆಗ ಶಿವರಾತ್ರಿ ನಿಜವಾದ ಅರ್ಥದಲ್ಲಿ ಆಚರಣೆಯಾಗುತ್ತದೆ. ಶಿವಲಿಂಗಾನಂದ ಶ್ರೀಗಳು ಹಲವಾರು ವರ್ಷಗಳಿಂದ ಈ ಇಂತಹ ಕಾರ್ಯಕ್ರಮ ನಡೆಸುತ್ತ ಸಾತ್ವಿಕ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಶಿವರಾತ್ರಿ ಆಚರಣೆ ವೈಜ್ಞಾನಿಕ ರೀತಿಯಲ್ಲಿ ಆಚರಣೆಯಾಗಬೇಕಿದೆ. ಹಿಂದಿನ ಕಾಲದಲ್ಲಿಯೂ ಸಹ ಉತ್ತಮ ರೀತಿಯಲ್ಲಿ ಅಚರಣೆ ಮಾಡುತ್ತಾ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಏರುಪೇರಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಸ್ವಾಮೀಜಿ, ಶಿವಲಿಂಗಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ನಿವೃತ್ತ ಉಪ ಆಯುಕ್ತ ಭೋಜರಾಜ್ ಮುಟಗಾರ, ಆರ್‌ಎಸ್‌ಎಸ್ ವಿಭಾಗ ಸಹ ಪ್ರಚಾರಕ್ ನವೀನ್ ಸುಬ್ರಹ್ಮಣ್ಯ, ನಗರಸಭೆ ಸದಸ್ಯ ಬಿ.ವೆಂಕಟೇಶ್, ಉದ್ಯಮಿ ಬಿ.ಶಂಕರಮೂರ್ತಿ, ಜಿ.ಎಂ.ಜಯಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss