ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ-ದುರ್ಗಾವಾಹಿನಿ ಕಾಸರಗೋಡು ಜಿಲ್ಲಾ ಘಟಕದ ನೇತೃತ್ವದಲ್ಲಿ ಗೀತಾಜಯಂತಿ ಅಂಗವಾಗಿ ನಡೆದ ಬದಿಯಡ್ಕದಲ್ಲಿ ಭಾನುವಾರ `ಶೌರ್ಯಸಂಚಲನ’ ಕಾರ್ಯಕ್ರಮ ಜರಗಿತು.
ಹಿಂದು ಐಕ್ಯವೇದಿ ಕೇರಳ ರಾಜ್ಯ ಕಾರ್ಯದರ್ಶಿ ಪಿ.ವಿ.ಮುರಳೀಧರನ್ ದಿಕ್ಸೂಚಿ ಭಾಷಣವನ್ನು ಮಾಡುತ್ತಾ ಕೇರಳ ರಾಜ್ಯದಲ್ಲಿ ನಡೆಯುತ್ತಿರುವ ಅಧಾರ್ಮಿಕತೆಗೆ ವಿರುದ್ಧವಾಗಿ ಹೋರಾಡಲು ಸಂಘ ಪರಿವಾರ ಸಂಘಟನೆಗಳು ಕಂಕಣಬದ್ಧವಾಗಿವೆ. ಗೀತೆಯ ಮೂಲಕ ಅರ್ಜುನನನ್ನು ಉತ್ತೇಜಿಸಿ, ಯುದ್ಧಕ್ಕೆರಗಲು ಪ್ರಚೋದನೆಯನ್ನು ನೀಡಿ ಕೌರವರ ಪಡೆಯನ್ನು ಹಿಮ್ಮೆಟ್ಟಿಸಿದ ಭಗವಾನ್ ಶ್ರೀಕೃಷ್ಣನ ಸಂದೇಶವನ್ನು ಮುಂದಿಟ್ಟುಕೊಂಡು ವಿಶ್ವಹಿಂದೂ ಪರಿಷತ್ನಿಂದ ಭಾರತೀಯತೆಯನ್ನು ಎತ್ತಿಹಿಡಿಯುವ ಪ್ರಕ್ರಿಯೆ ನಡೆಯುತ್ತಿದೆ. ಪಿಣರಾಯಿ ವಿಜಯನ್ ನೇತೃತ್ವದ ಸರಕಾರವು ಹಿಂದೂ ವಿರೋಧಿ ಸರಕಾರವಾಗಿದೆ. ತುಪ್ಪಿದ ಆಹಾರವನ್ನು ನಮ್ಮ ಕ್ಷೇತ್ರಗಳಿಗೆ ತಲುಪಿಸುವ ಹಂತಕ್ಕೆ ಕೇರಳದ ಪಿಣರಾಯಿ ಸರಕಾರವು ಬಂದಿದೆ. ಆಹಾರವನ್ನು ಶುದ್ಧ ಜಲ ಪ್ರೋಕ್ಷಣೆಯಿಂದ ಅಮೃತವಾಗಿಸಿ ಸೇವಿಸುವ ಸಂಸ್ಕೃತಿ ನಮ್ಮದು. ಇಸ್ಲಾಂ ಸಮುದಾಯದ ಆಚಾರಕ್ಕೆ ನಾವು ವಿರೋಧಿಯಲ್ಲ. ನಮ್ಮ ಕ್ಷೇತ್ರಗಳ ಪಾವಿತ್ರ್ಯತೆಯನ್ನು ಹಾಳುಗೆಡವಲು ನಾವು ಬಿಡುವುದಿಲ್ಲ. ಹಿಂದು ಆಚಾರ ಅನುಷ್ಠಾನಗಳ ಪ್ರಕಾರ ನಡೆಯುವ ದೇವಸ್ಥಾನಗಳಿಗೆ ಹಲಾಲ್ ಬೆಲ್ಲಕ್ಕೆ ಗುತ್ತಿಗೆಯನ್ನು ನೀಡಿದ ಎಡಪಕ್ಷದ ಸರಕಾರದ ವಿರುದ್ಧ ಧ್ವನಿ ಎತ್ತಲು ಕಮ್ಯೂನಿಸ್ಟ್ ಪಕ್ಷದ ಹಿಂದುಗಳಿಗೆ ಸಾಧ್ಯವಿದೆಯೇ? ಎಂದರು.
ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ವಿಹಿಂಪ ಬದಿಯಡ್ಕ ಪ್ರಖಂಡ ಅಧ್ಯಕ್ಷ ಹರಿಪ್ರಸಾದ್ ಪುತ್ರಕಳ, ಕಾಸರಗೋಡು ಜಿಲ್ಲಾ ಉಪಾಧ್ಯಕ್ಷೆ ಮೀರಾ ಆಳ್ವ, ಬಜರಂಗದಳ ಕಾಸರಗೋಡು ಜಿಲ್ಲಾ ಸಂಯೋಜಕ ಶೈಲೇಶ್ ಅಂಜರೆ, ಮಾತೃಶಕ್ತಿ ಬದಿಯಡ್ಕ ಪ್ರಖಂಡ ಅಧ್ಯಕ್ಷೆ ಜಯಂತಿ ಚೆಟ್ಟಿಯಾರ್, ದುರ್ಗಾವಾಹಿನಿ ಬದಿಯಡ್ಕ ಪ್ರಖಂಡ ಸಂಯೋಜಕಿ ಕವಿತಾ ಕಿಶೋರ್ ಉಪಸ್ಥಿತರಿದ್ದರು.
ವಿಹಿಂಪ ಬದಿಯಡ್ಕ ಪ್ರಖಂಡ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಮಾರ್ ಶಕ್ತಿನಗರ ಸ್ವಾಗತಿಸಿ, ವಿಹಿಂಪ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು ವಂದಿಸಿದರು. ಪ್ರಖಂಡ ಉಪಾಧ್ಯಕ್ಷ ಪ್ರದೀಪ್ ಬೆಳ್ಳೂರು, ಕಾರ್ಯದರ್ಶಿಗಳಾದ ಮಂಜುನಾಥ ಮಾನ್ಯ, ರಾಜಾರಾಮ ಬಾಳಿಗ ಪೆರ್ಲ, ರಮೇಶ್ ಕೃಷ್ಣ ಪದ್ಮಾರು ಸಹಕರಿಸಿದರು. ಪ್ರಾರಂಭದಲ್ಲಿ ಬದಿಯಡ್ಕ ಬೋಳುಕಟ್ಟೆ ಕ್ರೀಡಾಂಗಣದಲ್ಲಿ ವಿಹಿಂಪ ಬದಿಯಡ್ಕ ಪ್ರಖಂಡ ಉಪಾಧ್ಯಕ್ಷ ಭಾಸ್ಕರ ಕೆ. ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ `ಶೌರ್ಯಸಂಚಲನ’ವನ್ನು ದುರ್ಗಾವಾಹಿನಿ ಕಾಸರಗೋಡು ಜಿಲ್ಲಾ ಸಂಚಾಲಕಿ ಸೌಮ್ಯ ಪ್ರಕಾಶ್ ಮಡಂಗಲ್ಲು ಉದ್ಘಾಟಿಸಿದರು. ನಂತರ ಶಿಸ್ತುಬದ್ಧವಾಗಿ ಬದಿಯಡ್ಕ ಪೇಟೆಯಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು.