ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಸೌರಾಷ್ಟ್ರ ತಂಡ ಗೆಲುವು ಸಾಧಿಸಿದೆ.
ಆರಂಭಿಕ ಬ್ಯಾಟರ್ ಶೆಲ್ಡಾನ್ ಜಾಕ್ಸನ್ (133) ಅವರ ಅಜೇಯ ಶತಕದ ನೆರವಿನಿಂದ ಸೌರಾಷ್ಟ್ರ ಗೆದ್ದು, ಎರಡನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡಿತು.
ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಮಹಾರಾಷ್ಟ್ರ ತಂಡ ನಿಗದಿತ 50 ಓವರ್ಗಳಲ್ಲಿ 246 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಸೌರಾಷ್ಟ್ರ 46.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 249 ರನ್ ಬಾರಿಸಿ ಗೆಲುವು ಕಂಡಿತು.
ಸೌರಾಷ್ಟ್ರ ಪರ ಹಾರ್ವಿಕ್ ದೇಸಾಯಿ (50) ಅರ್ಧ ಶತಕ ಬಾರಿಸಿದರೆ, ಶೆಲ್ಡಾನ್ ಜಾಕ್ಸನ್ ಶತಕ ಬಾರಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 125 ರನ್ ಬಾರಿಸುವ ಮೂಲಕ ತಂಡದ ಜಯಕ್ಕೆ ಭದ್ರ ಬುನಾದಿ ಹಾಕಿದರು. ಅಂತಿಮವಾಗಿ ಚಿರಾಗ್ ಜಾನಿ ಅಜೇಯ 30 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದರು.
ಮಹಾರಾಷ್ಟ್ರ ತಂಡದ ಪರ ಋತುರಾಜ್ ಗಾಯಕ್ವಾಡ್ (108) ಶತಕ ಬಾರಿಸಿದರು.