Wednesday, June 7, 2023

Latest Posts

ಕಾಂಗ್ರೆಸ್ ಪರ ಕೆಲಸಕ್ಕೆ ಬಿಎಲ್‌ಒಗಳಿಗೆ ಬಾಡೂಟ ನೀಡಿ, ಆಣೆ, ಪ್ರಮಾಣ: ವಿಜುಗೌಡ ಪಾಟೀಲ ಆರೋಪ

ಹೊಸದಿಗಂತ ವರದಿ, ವಿಜಯಪುರ:

ಬಬಲೇಶ್ವರ ಕ್ಷೇತ್ರದ ಬಿಎಲ್‌ಒಗಳಿಗೆ ಬಾಡೂಟ ಉಣಬಡಿಸಿ, ಕಾಂಗ್ರೆಸ್ ಪರ ಕಾರ್ಯನಿರ್ವಹಿಸುವಂತೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ ಎಂದು ಬಬಲೇಶ್ವರ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಠಾಣ ಮತಕ್ಷೇತ್ರದ ದ್ಯಾಬೇರಿಯ ವಾಗುಬಾಯಿ ದೇವಸ್ಥಾನದಲ್ಲಿ ಬಬಲೇಶ್ವರ ಕ್ಷೇತ್ರದ ಬಿಎಲ್‌ಒಗಳಿಗೆ ಬಾಡೂಟ ಉಣಬಡಿಸಿ, ಆಸೆ, ಆಮಿಷೆ ತೋರಿಸಿ ಚುಣಾವಣೆ ಅಕ್ರಮಕ್ಕೆ ಚಿತಾವಣೆ ನೀಡಿದ್ದಾರೆ ಎಂದು ದೂರಿದರು.
ಪ್ರಜಾಪ್ರಭುತ್ವದಲ್ಲಿ ನ್ಯಾಯಯುತ ಚುನಾವಣೆಗಳು ನಡೆಯಬೇಕು. ತಾವು 3 ಬಾರಿ ಸ್ಪರ್ಧೆ ಮಾಡಿ ಸೋತಿದ್ದರೂ, ಯಾವುದೇ ರೀತಿಯ ವಾಮಮಾರ್ಗ ಮಾಡಿಲ್ಲ. ಬಬಲೇಶ್ವರ ಬಿಎಲ್‌ಒಗಳು ಒಟ್ಟಿಗೆ ಏಕೆ ? ಅಲ್ಲಿಗೆ ಹೋದರು. ಕಾಂಗ್ರೆಸ್‌ನವರು ಅವರಿಗೆ ಯಾವ ರೀತಿ ಆಮಿಷ ಒಡ್ಡಿದ್ದಾರೆ ? ಎನ್ನುವುದನ್ನು ಚುನಾವಣಾ ಆಯೋಗ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೇ ಬಬಲೇಶ್ವರ ಮತಕ್ಷೇತ್ರಕ್ಕೆ ಬೇರೆ ಬಿಎಲ್‌ಒಗಳನ್ನು ಹಾಕಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣದ ಕುರಿತು ಚುನಾವಣಾ ಆಯೋಗ, ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಪ್ರಕರಣದ ಗಂಭೀರತೆಯನ್ನು ವಿವರಿಸಿದ್ದೇನೆ. ಅರ್ಜುನ ಲಮಾಣಿ, ಹಣಮಂತ ಕೊಣದಿ, ಚಂದ್ರಶೇಖರ ಜತ್ತಿ, ಶ್ರೀಮಂತ ಕೋಳಿ ಸೇರಿದಂತೆ 9 ಮಂದಿ ಬಿಎಲ್‌ಒಗಳ ಮೇಲೆ ಕ್ರಮ ಜರುಗಿಸುವಂತೆ ದೂರು ನೀಡಿರುವೆ. ಈ ರೀತಿಯ ಘಟನೆಗಳು ನಡೆದಾಗ 24 ಗಂಟೆಗಳಲ್ಲಿಯೇ ಆಯೋಗ ಕ್ರಮ ಜರುಗಿಸುತ್ತದೆ. ಆದರೆ 48 ಗಂಟೆಗಳು ಕಳೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.
ತಾವು 3 ಬಾರಿ ಸೋತಿದ್ದರೂ ಜನರ ಮನಸ್ಸಿನಲ್ಲಿ ಇದ್ದೇನೆ. 2023 ರ ಚುನಾವಣೆಯಲ್ಲಿ 60 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಬಿಜೆಪಿಯಲ್ಲಿ ಎಲ್ಲರೂ ಒಟ್ಟಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇವೆ. ಬಬಲೇಶ್ವರದಲ್ಲಿ ಈ ಬಾರಿ ಕಮಲ ಅರಳುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನಮ್ಮ ಹಿರಿಯ ಅಣ್ಣ. ಮತದಾನದ ದಿನ ನಾನೇ ಅವರಿಗೆ ಮೊದಲ ಓಟ್ ಚಲಾಯಿಸಿ ಬಬಲೇಶ್ವರ ಕ್ಷೇತ್ರಕ್ಕೆ ತೆರಳುತ್ತೇನೆ. ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಅವರನ್ನು ಆಹ್ವಾನಿಸುತ್ತೇನೆ. ಅವರು ಕರೆದರೂ ರಾಜ್ಯದ 224 ಕ್ಷೇತ್ರದಲ್ಲೂ ಪ್ರಚಾರಕ್ಕೆ ಹೋಗುತ್ತೇನೆ. ಎಲ್ಲರೂ ಒಗ್ಗಟ್ಟಾಗಿದ್ದೇವೆ ಜಿಲ್ಲೆಯ ಎಂಟು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಿಸಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡುತ್ತೇವೆ ಎಂದರು.
ಈ ಹಿಂದೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಎಂ.ಬಿ.ಪಾಟೀಲಗೆ ಸಚಿವ ಸ್ಥಾನ ನೀಡದ್ದಕ್ಕೆ ಅತ್ತಿದ್ದರು. ಜನ ಶಾಸಕರನ್ನಾಗಿ ಮಾಡಿದ್ದರೂ ಅಧಿಕಾರದ ಆಸೆಗಾಗಿ ಅತ್ತಿದ್ದರು. ಅವರು ಅಳುವಗ ಜಂಡೂ ಬಾಂಬ್ ಹಚ್ಚಿಕೊಂಡಿದ್ದರಾ ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡರಾದ ಗುರಲಿಂಗಪ್ಪ ಅಂಗಡಿ, ಡಾ.ಸುರೇಶ ಬಿರಾದಾರ, ಉಮೇಶ ಕೋಳಕೂರ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!