ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಬಾವಿಗೆ ಬಿದ್ದಿದ್ದ 8 ವರ್ಷದ ಬಾಲಕಿಯನ್ನು ರಕ್ಷಿಸಲು ಹೋದಾಗ ಮಣ್ಣು ಕುಸಿದು 30 ಜನ ಬಾವಿಗೆ ಬಿದ್ದಿರುವ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಪ್ರಕರಣದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. 19 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ಗುರುವಾರ ರಾತ್ರಿ ವಿದಿಶಾ ಜಿಲ್ಲೆಯ ಗಂಜ್ ಬಸೌಡಾದಲ್ಲಿ ಈ ದುರ್ಘಟನೆ ನಡೆದಿದ್ದು, ಶುಕ್ರವಾರ 4 ಮೃತದೇಹಗಳನ್ನು ಬಾವಿಯಿಂದ ಹೊರತೆಗೆಯಲಾಗಿತ್ತು. ಇದೀಗ 11 ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.
ಬಾವಿಗೆ ಬಿದ್ದ ಬಾಲಕಿಯನ್ನು ರಕ್ಷಿಸಲು ಗ್ರಾಮಸ್ಥರು ಪ್ರಯತ್ನ ಮಾಡುವಾಗ ಭಾರದಿಂದ ಬಾವಿಯ ಮೇಲ್ಛಾವಣಿ ಕುಸಿದು 50 ಅಡಿ ಆಳದ 20 ಅಡಿ ನೀರಿರುವ ಬಾವಿ ಒಳಗೆ ಗ್ರಾಮಸ್ಥರು ಬಿದ್ದಿದ್ದರು.
ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಇದೀಗ 11 ಮೃತದೇಹಗಳನ್ನು ಬಾವಿಯಿಂದ ಹೊರತೆಗೆದಿದ್ದಾರೆ. ಬಾವಿ ಒಳಗಿನ ಅವಶೇಷಗಳ ಅಡಿಯಲ್ಲಿ ಯಾರೂ ಸಿಲುಕಿರುವ ಶಂಕೆ ಇಲ್ಲ. ಆದರೂ ನೀರನೆಲ್ಲ ಖಾಲಿ ಮಾಡಿ ಅವಶೇಷಗಳನ್ನು ತೆಗೆದುಹಾಕುವ ಕೆಲಸ ನಡೆಯುತ್ತಿದೆ.
ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 5 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದ್ದಾರೆ.