Saturday, August 13, 2022

Latest Posts

ಬತ್ತಿ ಹೋಗಿರುವ ಆನೆ ಕೆರೆಗೆ ನೀರು ಹರಿಸಲು ಗ್ರಾಮಸ್ಥರ ಒತ್ತಾಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕುಶಾಲನಗರ:

ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿರುವ ಪುರಾತನ ಕಾಲದ ಆನೆ ಕೆರೆ ನೀರಿಲ್ಲದೆ ಬತ್ತಿಹೋಗುವ ಹಂತಕ್ಕೆ ತಲುಪಿದ್ದು, ಈ ಕೆರೆಗೆ ನೀರು ಹರಿಸುವಂತೆ ಈ ವ್ಯಾಪ್ತಿಯ ನೂರಾರು ರೈತರ ಅಗ್ರಹಿಸಿದ್ದಾರೆ.
ಆನೆಕೆರೆಯು ಸುಮಾರು 12 ಎಕರೆಗಳಷ್ಟು ವಿಸ್ತಾರವಾಗಿದ್ದು, ಕಂದಾಯ ಇಲಾಖೆಯಿಂದ ಸರ್ವೆ ಕಾರ್ಯ ನಡೆಸಿ ಒತ್ತುವರಿಯಾಗಿದ್ದ ಜಾಗವನ್ನು ಬಿಡಿಸಲಾಗಿದೆ. ಈ ಕೆರೆಯಿಂದ ನಾಲ್ಕು ಗ್ರಾಮಗಳ ರೈತರಿಗೆ ಬೇಸಾಯ ಮಾಡಲು ನೀರಿನ ಸೌಲಭ್ಯದ ಜೊತೆಗೆ ಕೊಳವೆಬಾವಿ ಕೊರೆಸಿರುವ ನೂರಾರು ರೈತರ ಬಾವಿಗಳಲ್ಲಿನ‌ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಹಾಯವಾಗಲಿದೆ. ಆದರೆ ಇದೀಗ ಆನೆ ಕೆರೆಯ ನೀರಿನ ಮಟ್ಟ ಸಂಪೂರ್ಣವಾಗಿ ಕುಸಿತಗೊಂಡಿರುವುದರಿಂದ ಅನೇಕ ಕೊಳವೆ ಬಾವಿಗಳ ಅಂತರ್ಜಲ ಕುಸಿತ ವಾಗಿದೆ.
ಗ್ರಾಮ ಪಂಚಾಯತಿ ವತಿಯಿಂದ ಕೊಳವೆ ಬಾವಿ ಕೊರೆಸಿ ಬಸವನತ್ತೂರು ಮತ್ತು ‌ಪಕ್ಕದ ಉಪ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಈ ಕೆರೆಯು ನಾಲ್ಕು ಗ್ರಾಮಗಳ ಮಧ್ಯದಲ್ಲಿರುವುದರಿಂದ ಈ ಕೆರೆಗೆ ಹಾರಂಗಿ ಅಣೆಕಟ್ಟೆಯಿಂದ ಅಥವಾ ಸಮೀಪದಲ್ಲೇ ಹರಿಯುತ್ತಿರುವ ಹಾರಂಗಿ ನದಿಯಿಂದ ನೀರನ್ನು ಹರಿಸುವಂತಾಗಬೇಕು ಎಂಬುದು ಗ್ರಾಮಸ್ಥರ ಪ್ರಮುಖ ಒತ್ತಾಯವಾಗಿದೆ.
ಈ ವ್ಯಾಪ್ತಿಯಲ್ಲಿರುವ ರೈತರು ಹೈನುಗಾರಿಕೆಗೆ ಹೆಚ್ಚು ಒತ್ತುಕೊಟ್ಟು ಅನೇಕ ನಾಟಿ ಹಸುಗಳನ್ನು ಸಾಕಿದ್ದು, ಅವರ ಜಾನುವಾರಗಳಿಗೆ ಕುಡಿಯುವ ನೀರಿನ ಅಗತ್ಯವಿದೆ. ಆನೆ ಕೆರೆಗೆ ಸರಕಾರದ ಕುಡಿಯುವ ನೀರು ಒದಗಿಸುವ ಯೋಜನೆಯಡಿಯಲ್ಲಿ ಅಥವಾ ಬೇರೆ ಯಾವುದಾದರೂ ಯೋಜನೆಯಡಿಯಲ್ಲಿ ನೀರನ್ನು ಹರಿಸಿದರೆ ಅಂತರ್ಜಲ ಹೆಚ್ಚುವುದರ ಜೊತೆಗೆ ಕೊಳವೆ ಬಾವಿಗಳಲ್ಲೂ ಸಮರ್ಪಕವಾಗಿ ನೀರು ದೊರೆಯಲಿರುವುದರಿಂದ ಈ ಭಾಗದ ರೈತರ ಬೇಸಾಯಕ್ಕೂ ಅನುಕೂಲವಾಗಲಿದೆ. ಆದ್ದರಿಂದ ಶೀಘ್ರವಾಗಿ ಕೆರೆಗೆ ನೀರು ಹರಿಸುವಂತಾಗಬೇಕೆಂದು ಬಸವನತ್ತೂರು ಗ್ರಾಮದ ನಿಂಗಯ್ಯ, ಕಾಳಪ್ಪ, ತೇಜು, ಬಿಜೂ, ರಾಜಣ್ಣ, ಕುಮಾರ್, ಕೂಡುಮಂಗಳೂರು ಗ್ರಾಮ ಬಿಜೆ‌ಪಿ ಶಕ್ತಿ ಕೇಂದ್ರದ ಪ್ರಮುಖ್ ಪ್ರವೀಣ್ ಕುಮಾರ್, ಗ್ರಾಮ ಪಂಚಾಯತಿ ಸದಸ್ಯ ದಿನೇಶ್ ಗ್ರಾಮದ ಪ್ರಮುಖರಾದ ಆರ್.ಕೆ ಕೃಷ್ಣ, ಜಯಂತ್, ರವಿ, ಸುಜಿತ್, ಹರ್ಷಿತ್, ಕಿರಣ ಸೇರಿದಂತೆ ಗ್ರಾಮದ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಗ್ರಹವಾಗಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss