ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಶಾಸಕ ವಿನಯ್ ಕುಲಕರ್ಣಿ ಇಂದು ನ್ಯಾಯಾಧೀಶರ ಮುಂದೆ ಶರಣಾಗಿದ್ದಾರೆ. ಕೂಡಲೇ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ.
ವಿನಯ್ ಕುಲಕರ್ಣಿ ಜಾಮೀನು ರದ್ದು ಮಾಡಿ ಶರಣಾಗತಿಗೆ ಸುಪ್ರೀಂ ಕೋರ್ಟ್ ಗಡುವು ನೀಡಿತ್ತು. ಒಂದು ವಾರದ ಗಡುವು ಹಿನ್ನೆಲೆ ಶಾಸಕ ಇಂದು ಜನಪ್ರತಿನಿಧಿ ವಿಶೇಷ ನ್ಯಾಯಾಲದ ಮುಂದೆ ಹಾಜರಾಗಿದ್ದರು. ಕೋರ್ಟ್ ಸೂಚನೆಯ ಮೇರೆಗೆ ಸಿಬಿಐ ವಶಕ್ಕೆ ಪಡೆದಿದ್ದು, ವಿಚಾರಣೆ ಮುಗಿದ ಬಳಿಕ ಪರಪ್ಪನ ಅಗ್ರಹಾರಕ್ಕೆ ವಿನಯ್ ಕುಲಕರ್ಣಿ ಮರಳಲಿದ್ದಾರೆ.
ವಿನಯ್ ಕುಲಕರ್ಣಿ ಪರ ವಕೀಲರು ಶರಣಾಗಲು ಸಮಯ ವಿಸ್ತರಿಸುವಂತೆ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾ. ಮನಮೋಹನ್ ಅವರಿದ್ದ ಪೀಠವು ಶರಣಾಗತಿಗೆ ಸಮಯ ನೀಡಲು ಕೋರ್ಟ್ ನಿರಾಕರಿಸಿದೆ.