ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರ ಮೇಲಿನ ದೌರ್ಜನ್ಯ ಕ್ಷಮಿಸಲಾಗದ ಪಾಪ. ತಪ್ಪಿತಸ್ಥರನ್ನು ಬಿಡಬಾರದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ‘ಲಕ್‌ಪತ್ ದೀದಿ ಸಮ್ಮೇಳನ’ದಲ್ಲಿ ಮಾತನಾಡಿದ ಮೋದಿ, ಕೋಲ್ಕತ್ತ ಆರ್.ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಹತ್ಯೆಯ ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಶಕ್ತಿಯನ್ನು ಹೆಚ್ಚಿಸುವುದರ ಜತೆಗೆ ಅವರ ಸುರಕ್ಷತೆಯ ಬಗ್ಗೆಯೂ ದೇಶ ಗಮನ ಹರಿಸುತ್ತದೆ. ಮಹಿಳೆಯರ ಸುರಕ್ಷತೆ ಬಗ್ಗೆ ನಾನು ಕೆಂಪು ಕೋಟೆಯಿಂದ ಪದೇ ಪದೆ ಹೇಳುತ್ತಿದ್ದೇನೆ. ಇಂದು ದೇಶದ ಯಾವುದೇ ರಾಜ್ಯವಾಗಿರಲಿ ಅಲ್ಲಿನ ನನ್ನ ಸಹೋದರಿಯರು ಮತ್ತು ಹೆಣ್ಣುಮಕ್ಕಳ ನೋವು ಮತ್ತು ಕೋಪವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಮಹಿಳೆಯರ ಮೇಲಿನ ಅಪರಾಧವು ಕ್ಷಮಿಸಲಾಗದ ಪಾಪ ಎನ್ನುವುದನ್ನು ನಾನು ಮತ್ತೊಮ್ಮೆ ದೇಶದ ಪ್ರತಿಯೊಂದು ರಾಜಕೀಯ ಪಕ್ಷಕ್ಕೆ, ಪ್ರತಿ ರಾಜ್ಯ ಸರ್ಕಾರಕ್ಕೆ ನೆನಪಿಸುತ್ತಿದ್ದೇನೆ ಎಂದು ಎಚ್ಚರಿಸಿದ್ದಾರೆ.
ಮಹಿಳೆಯ ಮೇಲೆ ದೌರ್ಜನ್ಯ ಎಸಗುವ ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಮಾತ್ರವಲ್ಲ ಅವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವವರನ್ನೂ ಕ್ಷಮಿಸಬಾರದು. ಆಸ್ಪತ್ರೆ, ಶಾಲೆ, ಸರ್ಕಾರ ಅಥವಾ ಪೊಲೀಸ್ ವ್ಯವಸ್ಥೆಯಾಗಿರಲಿ ಯಾವುದೇ ಮಟ್ಟದಲ್ಲಿನ, ಚಿಕ್ಕ ನಿರ್ಲಕ್ಷ್ಯವನ್ನೂ ಸಹಿಸಲು ಸಾಧ್ಯವಿಲ್ಲ. ಅಪರಾಧದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಬೇಕು. ಈ ಅಪರಾಧ ಕ್ಷಮಿಸಲಾಗದು ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಬೇಕು ಎಂದು ಮೋದಿ ಸೂಚಿಸಿದ್ದಾರೆ.
ತಮ್ಮ ಸರ್ಕಾರ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಲಿ ಜಾರಿಗೊಳಿಸಿರುವ ಹೊಸ ಕಾನೂನುಗಳನ್ನೂ ಮೋದಿ ಈ ವೇಳೆ ವಿವರಿಸಿದ್ದಾರೆ. ಇಂದು ದೊಡ್ಡ ಸಂಖ್ಯೆಯಲ್ಲಿ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಸೇರಿದ್ದಾರೆ. ನಿಮ್ಮ ಸುರಕ್ಷತೆಗಾಗಿ ನಮ್ಮ ಸರ್ಕಾರ ಕೈಗೊಂಡ ಕೆಲವು ಕ್ರಮಗಳ ಕುರಿತು ಹೇಳಲು ಬಯಸುತ್ತೇನೆ. ಈ ಹಿಂದೆ ಎಫ್ಐಆರ್‌ಗಳನ್ನು ಸಮಯಕ್ಕೆ ಸರಿಯಾಗಿ ದಾಖಲಿಸುತ್ತಿಲ್ಲ, ಸರಿಯಾಗಿ ವಿಚಾರಣೆ ನಡೆಯುತ್ತಿಲ್ಲ ಎಂಬೆಲ್ಲ ದೂರುಗಳು ಬರುತ್ತಿದ್ದವು. ಭಾರತೀಯ ನ್ಯಾಯ ಸಂಹಿತೆಯಲ್ಲಿದ್ದ ಇಂತಹ ಅನೇಕ ಅಡೆತಡೆಗಳನ್ನು ನಾವು ತೆಗೆದು ಹಾಕಿದ್ದೇವೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಹೊಸ ಅಧ್ಯಾಯವನ್ನು ರಚಿಸಲಾಗಿದೆ. ಸಂತ್ರಸ್ತ ಮಹಿಳೆಯರು ಪೊಲೀಸ್ ಠಾಣೆಗೆ ಹೋಗಲು ಬಯಸದಿದ್ದರೆ ಅವರು ಮನೆಯಿಂದ ಇ-ಎಫ್ಐಆರ್ ದಾಖಲಿಸಬಹುದು ಎಂದು ಪ್ರಧಾನಿ ವಿವರಿಸಿದ್ದಾರೆ.
ಏನಿದು ಲಕ್‌ಪತಿ ದೀದಿ ಯೋಜನೆ?
2024ರ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಮಹತ್ವದ ಯೋಜನೆಗಳಲ್ಲಿ ʼಲಕ್‌ಪತಿ ದೀದಿʼಯೂ ಒಂದು. ಸ್ವಸಹಾಯ ಗುಂಪುಗಳಿಗೆ ವರ್ಷಕ್ಕೆ ಒಂದು ಲಕ್ಷ ರೂ.ವರೆಗೆ ಆದಾಯ ಗಳಿಸುವಂತೆ ಮಾಡುವ ಯೋಜನೆ ಇದಾಗಿದೆ. ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಉದ್ದೇಶವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೊಂದಿದೆ. ಈ ಯೋಜನೆಯಡಿ, ಮಹಿಳೆಯರಿಗೆ ಪ್ಲಂಬಿಂಗ್, ಎಲ್ಇಡಿ ಬಲ್ಬ್ ತಯಾರಿಕೆ ಮತ್ತು ಡ್ರೋನ್‌ಗಳ ಕಾರ್ಯಾಚರಣೆ ಮತ್ತು ದುರಸ್ತಿಯಂತಹ ಕೌಶಲಗಳ ತರಬೇತಿ ನೀಡಲಾಗುತ್ತದೆ.