ಪಾಕಿಸ್ತಾನದಲ್ಲಿ ಹಿಂಸಾಚಾರ: ತಕ್ಷಣ ತವರಿಗೆ ಮರಳಿ, ಬ್ರಿಡ್ಜ್‌ ಟೂರ್ನಿಗೆ ಬಂದಿದ್ದ ಭಾರತ ತಂಡಕ್ಕೆ ಸೂಚನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್​ (Imran Khan) ಅವರ ಬಂಧನದ ಬಳಿಕ ಪಾಕ್​ನಲ್ಲಿ ಹಿಂಸಾಚಾರ ಭುಗಿಲೆದಿದ್ದು, ಎಲ್ಲೆಡೆ ವ್ಯಾಪಕ ಗಲಾಟೆ ನಡೆಯುತ್ತಿದೆ.

ಈ ನಿಟ್ಟಿನಲ್ಲಿ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಬುಧವಾರ ಏಷ್ಯಾ ಮತ್ತು ಮಿಡಲ್ ಈಸ್ಟ್ ಬ್ರಿಡ್ಜ್ ಚಾಂಪಿಯನ್‌ಶಿಪ್‌ನಲ್ಲಿ(Bridge Tournament) ಭಾಗವಹಿಸಲು ಬಂದಿರುವ ಭಾರತ ತಂಡಕ್ಕೆ ತಕ್ಷಣವೇ ಪಾಕಿಸ್ತಾನವನ್ನು ತೊರೆದು ಭಾರತಕ್ಕೆ ಹಿಂತಿರುಗುವಂತೆ ಸೂಚನೆ ನೀಡಿದೆ.

ಟೂರ್ನಿಯಲ್ಲಿ ಪಾಲ್ಗೊಳ್ಳಲು 30 ಮಂದಿ ಸದಸ್ಯರ ಭಾರತ ತಂಡವು ಕಳೆದ ವಾರ ವಾಘಾ ಬಾರ್ಡರ್ ಮೂಲಕ ಲಾಹೋರ್ ತಲುಪಿತ್ತು. ಈವೆಂಟ್‌ಗಳಲ್ಲಿ ಭಾರತ ಮಾತ್ರವಲ್ಲದೆ, ಸೌದಿ ಅರೇಬಿಯಾ, ಯುಎಇ, ಜೋರ್ಡಾನ್ ಮತ್ತು ಬಾಂಗ್ಲಾದೇಶ ಮತ್ತು ಪ್ಯಾಲೆಸ್ಟೈನ್ ದೇಶಗಳು ಭಾಗವಹಿಸಬೇಕಿದ್ದವು. ಸದ್ಯ ಪಾಕ್​ನಲ್ಲಿ ನಡೆಯುತ್ತಿರುವ ಗಲಾಟೆಯಿಂದ ಎಲ್ಲ ದೇಶಗಳು ತಮ್ಮ ದೇಶಕ್ಕೆ ಮರಳುವ ಸಿದ್ಧತೆ ಆರಂಭಿಸಿವೆ.

ಇಮ್ರಾನ್​ ಖಾನ್​ ಅವರನ್ನು ಬಂಧಿಸಿರುವ ಕಾರಣಕ್ಕೆ ಅವರ ಅನುಯಾಯಿಗಳು ಮತ್ತು ಅವರ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಉಗ್ರ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಸಿಕ್ಕ ಸಿಕ್ಕ ವಾಹನ ಮತ್ತು ವಸ್ತುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ.

ಪ್ರತಿಭಟನಾಕಾರರ ದಾಳಿಗೆ 130ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿ ಇನ್ನೂ ಕೂಡ ತೀವ್ರಗೊಳ್ಳುವ ಸುಳಿವು ಸಿಕ್ಕ ಕಾರಣ ಭಾರತೀಯ ಹೈಕಮಿಷನ್, ಬ್ರಿಡ್ಜ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಬಂದಿರುವ ಭಾರತೀಯ ತಂಡಕ್ಕೆ ತಕ್ಷಣ ತವರಿಗೆ ಮರಳುವಂತೆ ಹೇಳಿದೆ. ಸದ್ಯ ಭಾರತ ತಂಡದ ಆಟಗಾರರು ಪಾಕ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಸುರಕ್ಷಿತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!