ಹೊಸದಿಗಂತ ಆನ್ ಲೈನ್ ಡೆಸ್ಕ್:
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ನಿನ್ನೆ ಸಂಭವಿಸಿದ ಹಿಂಸಾಚಾರವನ್ನು ಮಮತಾ ಬ್ಯಾನರ್ಜಿ ರಾಜಕೀಯಗೊಳಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿರುವ ಶಾ ಅವರು, ಇಂತಹ ಘಟನೆ ಸಂಭವಿಸಬಾರದಿತ್ತು. ಆದರೆ, ಕೆಲ ದುಷ್ಕರ್ಮಿಗಳು ಮತದಾನದ ವೇಳೆ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿಯ ಶಸ್ತ್ರಗಳನ್ನು ಹೊತ್ತೊಯ್ಯಲು ನೋಡಿದ್ದಾರೆ. ಇದರಿಂದ ಅನಿವಾರ್ಯವಾಗಿ ಗುಂಡು ಹಾರಿದೆ. ಆದರೆ ಇದಕ್ಕಿಂತ ಕೆಟ್ಟ ಸಂಗತಿ ಎಂದರೆ ಈ ಘಟನೆಯನ್ನು ಮಮತಾ ಬ್ಯಾನರ್ಜಿ ರಾಜಕೀಯಗೊಳಿಸುತ್ತಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಕೂಚ್ ಬೆಹರ್ ಜಿಲ್ಲೆಯ ಸೀತಾಲಕುಚಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ ಚುನಾವಣಾ ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಮತಗಟ್ಟೆಯೊಂದರಲ್ಲಿ ಹಿಂಸಾಚಾರಕ್ಕೆ ಯತ್ನಿಸಿದವರ ಮೇಲೆ ಭದ್ರತೆಯಲ್ಲಿದ್ದ ಸಿಐಎಸ್ಎಫ್ ಯೋಧರು ಹಾರಿಸಿದ ಗುಂಡಿನಿಂದ ಐವರು ಮತದಾರರು ಮೃತಪಟ್ಟಿದ್ದಾರೆ. ಇದಕ್ಕೆ ಅಮಿತ್ ಶಾ ಅವರೇ ಕಾರಣ ಎಂದು ದೀದಿ ಶನಿವಾರ ಹೇಳಿದ್ದಾರೆ.