ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿಗಳಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಹೀಗಾಗಿ ಅವರ ಪ್ರತಿಷ್ಠಾನವು ತನ್ನ ಪ್ರಾಣಿ ಕಲ್ಯಾಣ ಯೋಜನೆಯ ಭಾಗವಾಗಿ ಮುಂಬೈ ಹೊರವಲಯದಲ್ಲಿ ಎರಡು ‘ಪ್ರಾಣಿಗಳ ಆಶ್ರಯ’ಗಳನ್ನು ಸ್ಥಾಪಿಸಲಿದೆ.
ರಾಟ್ ಕೊಹ್ಲಿ ಫೌಂಡೇಶನ್ ವಿವಾಲ್ಡಿಸ್ ಅನಿಮಲ್ ಹೆಲ್ತ್ ಹಾಗೂ ಆವಾಜ್, ವಾಯ್ಸ್ ಆಫ್ ಸ್ಟ್ರೇ ಅನಿಮಲ್ಸ್ ಎಂಬ ಮುಂಬೈ ಮೂಲದ ಎನ್ಜಿಒಗಳ ಜತೆಗಿನ ಸಹಯೋಗದೊಂದಿಗೆ ಈ ಯೋಜನೆ ರೂಪಿಸಿದೆ. ಮಲಾಡ್ ಮತ್ತು ಬೋಯಿಸಾರ್ನಲ್ಲಿ ಆಶ್ರಯವನ್ನು ಸ್ಥಾಪಿಸಲಾಗುವುದು ಎಂದು ತಿಳಿದು ಬಂದಿದೆ.
ಪ್ರಾಣಿಪ್ರಿಯರು ಮತ್ತು ಸಂರಕ್ಷಕರು ಏಪ್ರಿಲ್ 4 ನೇ ತಾರೀಖನ್ನು ‘ವರ್ಲ್ಡ್ ಸ್ಟ್ರೇ ಅನಿಮಲ್ಸ್ ಡೇ’ ಎಂದು ಆಚರಿಸುತ್ತಾರೆ. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ತಮ್ಮ ಸೇವಾ ಟ್ರಸ್ಟ್ನಿಂದ ಮುಂಬೈನ ಬೀದಿ ಪ್ರಾಣಿಗಳಿಗೆ ಆಶ್ರಯ ಕೇಂದ್ರಗಳನ್ನು ಸ್ಠಾಪಿಸುವ ತಮ್ಮ ಯೋಜನೆ ಬಗ್ಗೆ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೊಹ್ಲಿ, ‘ಅನುಷ್ಕಾ ತಮ್ಮ ಪ್ರಾಣಿಪ್ರೇಮದಿಂದ ಮತ್ತು ನಿರಂತರ ಪ್ರಾಣಿ ಹಕ್ಕುಗಳ ಸಮರ್ಥನೆ ಮಾಡುವ ಮೂಲಕ ಪ್ರೇರಣೆ ನೀಡಿದ್ದಕ್ಕೆ ಧನ್ಯವಾದ’ ಸೂಚಿಸಿದ್ದಾರೆ.
ಮಲಾಡ್ ಕೇಂದ್ರವು ತಾತ್ಕಾಲಿಕ ಪುನರ್ವಸತಿ ಕೇಂದ್ರವಾಗಲಿದ್ದು, ಗಾಯಗೊಂಡಿರುವ ಪ್ರಾಣಿಗಳನ್ನು – ಮುಖ್ಯವಾಗಿ ನಾಯಿಗಳು ಮತ್ತು ಬೆಕ್ಕುಗಳು – ಚೇತರಿಸಿಕೊಳ್ಳುವವರೆಗೆ ಇಟ್ಟುಕೊಂಡು ವೈದ್ಯಕೀಯ ಶುಶ್ರೂಷೆ ಮಾಡಲಾಗುವುದು.
ಬೋಯಿಸಾರ್ನಲ್ಲಿನ ಕೇಂದ್ರವು ಶಾಶ್ವತ ಆಶ್ರಯವಾಗಲಿದ್ದು, ಇಲ್ಲಿ ಕುರುಡು ಪ್ರಾಣಿಗಳು, ಪಾರ್ಶ್ವವಾಯು ಅಥವಾ ಬೇರೆ ಜೀವಿತಾವಧಿಯ ಕಾಯಿಲೆಗಳಿಂದ ಅಥವಾ ವೃದ್ಧಾಪ್ಯದಿಂದ ಬಳಲುತ್ತಿರುವ ಪ್ರಾಣಿಗಳನ್ನು ಕಾಪಾಡಲಾಗುವುದು ಎನ್ನಲಾಗಿದೆ.