ಫಾರ್ಮ್‌ಗೆ ಮರಳಲು ಕೊಹ್ಲಿ ಮಾಡಿದ್ದೇನು.. ಪಂದ್ಯ ಗೆದ್ದ ಬಳಿಕ ಮನಬಿಚ್ಚಿ ಮಾತನಾಡಿದ ವಿರಾಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ಲೇ ಆಫ್‌ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಗೆದ್ದು ಬೀಗಿರುವ ಆರ್ಸಿಬಿ ಪ್ಲೇ ಆಫ್‌ ರೇಸ್‌ ನಲ್ಲಿ ಉಳಿದುಕೊಂಡಿದೆ.
ಗುರುವಾರ ರಾತ್ರಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ ಎಂಟು ವಿಕೆಟ್‌ಗಳ ಅಮೋಘ ಗೆಲವು ದಾಖಲಿಸಿತು. ಮುಂದಿನ ಪಂದ್ಯದಲ್ಲಿ ಮುಂಬೈ ತಂಡ ಡೆಲ್ಲಿ ವಿರುದ್ಧ ಗೆದ್ದರೆ ಆರ್ಸಿಬಿ ಪ್ಲೇ ಆಫ್‌ ಪ್ರವೇಶಿಸಲಿದೆ.
ಗುಜರಾತ್‌ ವಿರುದ್ಧದ ಪಂದ್ಯದ ಹೈಲೈಟ್ ಎಂದರೆ ವಿರಾಟ್ ಕೊಹ್ಲಿಯ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್. ಸತತ ಫಾರ್ಮ್‌ ಕೊರತೆಯಿಂದ ಒದ್ದಾಡುತ್ತಿದ್ದ ಕೊಹ್ಲಿ ಈ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದರು. ಕೇವಲ 53 ಎಸೆತಗಳಲ್ಲಿ 73 ರನ್ ಸಿಡಿಸಿದ ಕೊಹ್ಲಿ ಫಾರ್ಮ್‌ಗೆ ಮರಳಿದರು. ಈ ಭರ್ಜರಿ ಇನ್ನಿಂಗ್ಸ್‌ ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗಳಿಸಿದರು. ಪಂದ್ಯ ಮುಗಿದ ನಂತರ ಮಾತನಾಡಿದ ಕೊಹ್ಲಿ, ಅನೇಕ ವಿಚಾರಗಳ ಕುರಿತಾಗಿ ಮನಬಿಚ್ಚಿ ಮಾತನಾಡಿದರು.
ನಾನು ನನ್ನ ತಂಡಕ್ಕೆ ಹೆಚ್ಚಿನದನ್ನು ಮಾಡಿಲ್ಲ ಎಂದು ನಿರಾಶೆಗೊಂಡಿದ್ದೆ. ಅದು ನನ್ನನ್ನು ತುಂಬಾ ಕಾಡುತ್ತಿತ್ತು. ನಮ್ಮ ಪ್ರದರ್ಶನದ ಮೇಲೆ ಜನರು ತುಂಬಾ ನಿರೀಕ್ಷೆಗಳನ್ನಿರಿಸಿಕೊಂಡಿದ್ದಾಗ ನಾವು ಉತ್ತಮವಾಗಿ ಆಡಲೇಬೇಕಾಗುತ್ತದೆ. ಆದರೆ ಅದು ನನಗೆ ಸಾಧ್ಯವಾಗುತ್ತಿರಲಿಲ್ಲ. ಈ ಪಂದ್ಯ ತಂಡಕ್ಕ ಬಹಳವೇ ಪ್ರಮುಖವಾಗಿತ್ತು. ಇಂದಿನ ಪಂದ್ಯದಲ್ಲಿ ತಂಡಕ್ಕೆ ನೆರವಾಗಲೇ ಬೇಕು ಎಂದು ನಿರ್ಧರಿಸಿ ನನ್ನನ್ನೇ ನಾನು ಹುರಿದುಂಬಿಸಿಕೊಳ್ಳುತ್ತಾ ಆಡುತ್ತಿದ್ದೆ. ಚನ್ನಾಗಿ ಆಡಬೇಕೆಂದರೆ ನಮ್ಮ ದೃಷ್ಟಿಕೋನಗಳನ್ನು ಸರಿಯಾಗಿ ಇಟ್ಟುಕೊಂಡಿರಬೇಕಾಗುತ್ತದೆ. ಈ ಪಂದ್ಯದಲ್ಲಿ ಚೆನ್ನಾಗಿ ಆಡಲು ಕಠಿಣ ಪರಿಶ್ರಮ ಪಟ್ಟಿದೆ. ಅದಕ್ಕಾಗಿ ನಾನು ನಿನ್ನೆ(ಬುಧವಾರ) ನೆಟ್ಸ್‌ನಲ್ಲಿ ಸತತ 90 ನಿಮಿಷಗಳ ಕಾಲ ಬ್ಯಾಟಿಂಗ್‌ ಮಾಡಿದ್ದೆ. ನನ್ನ ಶ್ರಮ ಫಲನೀಡಿತು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಈ ಗೆಲುವಿನೊಂದಿಗೆ ಆರ್‌ಸಿಬಿ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿತು. ಈಗ ಪಂದ್ಯಾವಳಿಯಲ್ಲಿ ಆರ್ಸಿಬಿ ಭವಿಷ್ಯವು ಶನಿವಾರ ಮುಂಬೈ ಇಂಡಿಯನ್ಸ್ (MI) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (DC) ಪಂದ್ಯವನ್ನು ಅವಲಂಬಿಸಿದೆ. DC ಗೆದ್ದರೆ, RCB ಗಿಂತ ಉತ್ತಮ ರನ್ ರೇಟ್ ಆಧಾರದ ಮೇಲೆ ಅವರು ಪ್ಲೇ ಆಫ್‌ಗೆ ಅರ್ಹತೆ ಪಡೆಯುತ್ತಾರೆ. ಜಿಟಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದರೆ, ರಾಜಸ್ಥಾನ್ ರಾಯಲ್ಸ್ (ಆರ್‌ಆರ್) 16 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!