ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಅವರು ಐಸಿಸಿ ವರ್ಷದ(ICC ODI Player Of The Year 2023) ಏಕದಿನ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಟಿ20 ವಿಶ್ವಕಪ್ ಆಡುವ ಸಲುವಾಗಿ ನ್ಯೂಯಾರ್ಕ್ನಲ್ಲಿರು ಕೊಹ್ಲಿ ಈ ಪ್ರಶಸ್ತಿಯನ್ನು ಇಲ್ಲಿಯೇ ಸ್ವೀಕರಿಸಿದ್ದಾರೆ. ಇದರ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದೆ. 2012, 2017, 2018 ರಲ್ಲಿಯೂ ಕೊಹ್ಲಿ ಈ ಪ್ರಶಸ್ತಿ ಪಡೆದಿದ್ದರು.
2022ರ ದ್ವಿತೀಯಾರ್ಧದಲ್ಲಿ ಮತ್ತೆ ಹಳೆಯ ಬ್ಯಾಟಿಂಗ್ ಫಾರ್ಮ್ಗೆ ಮರಳಿದ ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಏಏಕದಿನ ಕ್ರಿಕೆಟ್ನಲ್ಲಿ ರನ್ಗಳ ಮಳೆಯನ್ನೇ ಸುರಿಸಿದ್ದರು. 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್-ಗವಾಸ್ಕರ್ ಸರಣಿಯ ಅಂತಿಮ ಪಂದ್ಯದಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೊಹ್ಲಿ 186 ರನ್ ಸಿಡಿಸಿದ್ದರು. ಇದು 2019 ರ ನಂತರ ಅವರ ಮೊದಲ ಟೆಸ್ಟ್ ಶತಕವಾಗಿತ್ತು.
ಆಸೀಸ್ ಬಳಿಕ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ನಲ್ಲಿ 121 ರನ್ ಗಳಿಸುವ ತಮ್ಮ ಶತಕದ ಸಂಖ್ಯೆಯನ್ನು ಮತ್ತೆ ಹೆಚ್ಚಿಸಿದರು. ಏಕದಿನ ಮಾದರಿಯಲ್ಲಿ ಹಲವಾರು ದಾಖಲೆಗಳನ್ನು ಪುಡಿಮಾಡಿ ಕಳೆದ ವರ್ಷ ಆರು ಶತಕಗಳನ್ನು ಬಾರಿಸಿದ್ದಾರೆ. ಜತೆಗೆ ಏಕದಿನ ಕ್ರಿಕೆಟ್ನಲ್ಲಿ ಸಚಿನ್ ಬಾರಿಸಿದ್ದ 49 ಶತಕದ ವಿಶ್ವ ದಾಖಲೆಯನ್ನು ಹಿಂದಿಕ್ಕಿ 50 ಶತಕ ಪೂರ್ತಿಗೊಳಿಸಿದ್ದರು. ವಿಶ್ವಕಪ್ ಟೂರ್ನಿಯಲ್ಲೂ 765 ರನ್ ಬಾರಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.
35 ವರ್ಷದ ಕೊಹ್ಲಿ 2023 ರಲ್ಲಿ 27 ಏಕದಿನ ಪಂದ್ಯಗಳಿಂದ 24 ಇನ್ನಿಂಗ್ಸ್‌ಗಳಲ್ಲಿ ಆರು ಶತಕಗಳು ಮತ್ತು ಎಂಟು ಅರ್ಧಶತಕಗಳೊಂದಿಗೆ 72.47 ರ ಸರಾಸರಿ ಮತ್ತು 99.13 ರ ಸ್ಟ್ರೈಕ್ ರೇಟ್‌ನಲ್ಲಿ 1,377 ರನ್ ಗಳಿಸಿದ್ದಾರೆ. ಈ ಪೈಕಿ ಗರಿಷ್ಠ ಸ್ಕೋರ್ 166* ಆಗಿತ್ತು.
ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ, ವಿರಾಟ್ 11 ಪಂದ್ಯಗಳಲ್ಲಿ 95.62 ಸರಾಸರಿಯಲ್ಲಿ 765 ರನ್‌ಗಳನ್ನು ಗಳಿಸಿದ್ದರು. ಇದರಲ್ಲಿ ಮೂರು ಶತಕಗಳು, ಆರು ಅರ್ಧ ಶತಕಗಳು ದಾಖಲಾಗಿತ್ತು.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಇದೀಗ ಟಿ20 ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ.