Wednesday, June 29, 2022

Latest Posts

ಐಸಿಸ್ ನಿಯತಕಾಲಿಕೆಯ ಮುಖಪುಟದಲ್ಲಿ ರುಂಡವಿಲ್ಲದ ಮುರ್ಡೇಶ್ವರನ ವಿಗ್ರಹ

ಹೊಸದಿಗಂತ ವರದಿ, ಅಂಕೋಲಾ:

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕ್ಷೇತ್ರ ಮುರ್ಡೇಶ್ವರದ ಬೃಹತ್ ಶಿವನ ಪ್ರತಿಮೆ ಶಿರ ಕತ್ತರಿಸಿದ ಚಿತ್ರವನ್ನು ಉಗ್ರ ಸಂಘಟನೆಯ ವಾಯ್ಸ್ ಆಫ್ ಹಿಂದ್ ನಿಯತಕಾಲಿಕೆ ಸಂಚಿಕೆಯ ಮುಖಪುಟದಲ್ಲಿ  ಹಾಕಲಾಗಿದೆ.
ಈ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು ಉಗ್ರ ಸಂಘಟನೆಗಳ ಕಣ್ಣು ಪ್ರವಾಸಿ ಕ್ಷೇತ್ರ ಮುರ್ಡೇಶ್ವರದ ಮೇಲೆ ಬಿದ್ದಿದೆಯಾ ಎಂಬ ಸಂಶಯಕ್ಕೆ ಕಾರಣವಾಗಿದೆ.
ಹಿಂದು ಧಾರ್ಮಿಕ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರ ಸಂಘಟನೆಗಳು ತಯಾರಿ ನಡೆಸಿವೆಯೇ ಅಥವಾ ಈ ರೀತಿಯ ಬೆದರಿಕೆ ಮೂಡಿಸುವ ತಂತ್ರಗಾರಿಕೆ ನಡೆಯುತ್ತಿದೆಯೇ ಎನ್ನುವ ಕುರಿತು ಸೂಕ್ತ ತನಿಖೆ ನಡೆಯುವ ಅಗತ್ಯತೆ ಇದೆ ಎಂಬ ಮಾತುಗಳು ಸಾರ್ವಜನಿಕ ವಲಯಗಳಿಂದ ಕೇಳಿ ಬಂದಿದೆ.

ಏನಿದು?

ಐಸಿಸ್ ಉಗ್ರ ಸಂಘಟನೆಯ ವಾಯ್ಸ್ ಆಪ್ ಹಿಂದ್ ಆನ್ ಲೈನ್ ನಿಯತಕಾಲಿಕೆ ಸಂಚಿಕೆಯಲ್ಲಿ ಮುರ್ಡೇಶ್ವರ ದೇವಸ್ಥಾನದ ಶಿವನ ಶಿರವನ್ನು ದ್ವಂಸಗೊಳಿಸಿ ಐಸಿಸ್ ಧ್ವಜ ಹಾರಿಸಿರುವ ಹಾಗೆ ಬಿಂಬಿಸಲಾಗಿದೆ. ಈ ಚಿತ್ರವನ್ನು ನಿಯತಕಾಲಿಕೆಯ ಮುಖಪುಟದಲ್ಲಿ ಹಾಕಲಾಗಿದೆ.
ಇದರ ಜತೆಗೆ ‘ಇದೀಗ ಸುಳ್ಳು ದೇವರುಗಳನ್ನು ಧ್ವಂಸಗೊಳಿಸುವ ಸಮಯ ಬಂದಿದೆ’ ಎಂಬ ಸಾಲುಗಳನ್ನು ಭಾವಚಿತ್ರದ ಕೆಳಗೆ ಬರೆಯಲಾಗಿರುವುದು ಕಂಡು ಬರುತ್ತಿದ್ದು  ಇದರಿಂದಾಗಿ ಮುರ್ಡೇಶ್ವರದ ಮೇಲೆ ಉಗ್ರ ಸಂಘಟನೆ ದಾಳಿ ನಡೆಸಲು ಸಂಚು ರೂಪಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರವ ಕುಖ್ಯಾತರ ಕಾರಸ್ಥಾನದ ತಾಣವೆಂದು ಗುರುತಿಸಲ್ಪಟ್ಟ ಭಟ್ಕಳದ ಮಡಿಲಿನಲ್ಲೇ ಪ್ರವಾಸಿ ಸ್ಥಳ ಮುರ್ಡೇಶ್ವರ ಇರುವುದರಿಂದ ಜನರಲ್ಲಿ  ಹೆಚ್ಚಿನ ಭಯಕ್ಕೆ ಕಾರಣವಾಗಿದೆ .
ಕಳೆದ ಅಗಸ್ಟ್ ತಿಂಗಳಲ್ಲಿ ಭಟ್ಕಳದಿಂದ ಐಸಿಸ್ ನ  ವಾಯ್ಸ್ ಆಪ್ ಹಿಂದ್ ನಿಯತಕಾಲಿಕಕ್ಕೆ ಬರಹಗಳನ್ನು ಬರೆಯುವ ಮೂಲಕ ಉಗ್ರ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದ ಜುಪ್ರಿ ಜುವಾಹರ್ ದಾಮುದಿ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದರು.
ಈಗ ಅದೇ ವಾಯ್ಸ್ ಆಪ್ ಹಿಂದ್ ನಿಯತಕಾಲಿಕೆಯ ಮೂಲಕ ಮುರ್ಡೇಶ್ವರದ ಚಿತ್ರ ಪ್ರಕಟಗೊಳಿಸಲಾಗಿದೆ ಎನ್ನಲಾಗುತ್ತಿದ್ದು ಇದು ಎಲ್ಲಿಂದ ಪ್ರಕಟಗೊಂಡಿದೆ ಎನ್ನುವ ಕುರಿತು ತನಿಖೆ ನಡೆಯಬೇಕಿದೆ.
ಈ ಕುರಿತು ಭಟ್ಕಳ ಶಾಸಕ ಸುನೀಲ ನಾಯ್ಕ ಪ್ರತಿಕ್ರಿಯೆ ನೀಡಿ ಹಿಂದೂ ದೇವಾಲಯಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪಕ್ಷದ ತತ್ವ ಸಿದ್ಧಾಂತಗಳಲ್ಲೊಂದಾಗಿದ್ದು, ಉಗ್ರ ಸಂಘಟನೆಯ ಹೆಡೆಮುರಿಕಟ್ಟಲು ರಕ್ಷಣಾ ಇಲಾಖೆ ಸದೃಢ ಮತ್ತು ಸಶಕ್ತವಾಗಿದೆ. ಇಂತಹ ಪೊಳ್ಳು ಬೆದರಿಕೆಗೆ ಹೆದರುವ ವ್ಯವಸ್ಥೆ ಈಗಿಲ್ಲ ಎಂದರು.
ಈ ಸಂಬಂಧ ಈಗಾಗಲೇ ಗೃಹ ಮಂತ್ರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ನೀಡಲಾಗಿದ್ದು, ಶೀಘ್ರವೇ ಭೇಟಿಯಾಗಿ ಮುರ್ಡೇಶ್ವರ ದೇವಸ್ಥಾನದ ಸುತ್ತ ಮುತ್ತ ಹೆಚ್ಚಿನ ಭದ್ರತೆ ಒದಗಿಸಲು ಕ್ರಮ ವಹಿಸಲಾಗುವುದು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss