ರಾಜ್ಯದ ಐಐಐಟಿ ಸಂಸ್ಥೆಯಿಂದ ಧ್ವನಿ ಭಾಷಾನುವಾದ ರೋಬೋಟ್ ಸಂಶೋಧನೆ!

ಹೊಸದಿಗಂತ ವರದಿ, ಧಾರವಾಡ:
ದೇಶದ ಪ್ರತಿಷ್ಠಿತ ಸಂಸ್ಥೆ ಧಾರವಾಡ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿ) ಓಡಿಸ್ಸಾದ ಬುಡಕಟ್ಟು ನಿವಾಸಿಗಳಿಗೆ ಬಹುಭಾಷಾ ಧ್ವನಿ ಅನುವಾದ ಮಾಡುವ ರೋಬೋಟ್ ಯಂತ್ರ ಸಿದ್ಧಪಡಿಸಿದೆ.
ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ, ಬುಡಕಟ್ಟು ಭಾಷೆಗಳಿಂದ ಇತರ ಭಾಷೆಗಳಿಗೆ ಧ್ವನಿ ಭಾಷಾನುವಾದ ಮಾಡುವುದು ಇದರ ಉದ್ದೇಶ ಎಂದು ಇಸಿಇ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಟಿ.ದೀಪಕ ತಿಳಿಸಿದರು.
ಈ ರೋಬೋಟ್ದಲ್ಲಿ ಬುಡಕಟ್ಟು ಜನರಿಗೆ ಇಂಗ್ಲೀಷ್ ಭಾಷಾ ಮಾಹಿತಿಯು ಬುಡಕಟ್ಟಿನ ಭಾಷೆಯಲ್ಲಿ ದೊರೆಯಲಿದೆ. ಓಡಿಸ್ಸಾದ ಕುಯಿ, ಮುಂಡಾರಿ ಭಾಷೆ ಹಾಗೂ ಕರ್ನಾಟಕದ ಲಂಬಾಣಿ ಹಾಗೂ ಸೋಲಿಗ ಭಾಷೆ ಆಯ್ಕೆ ಮಾಡಿಕೊಂಡಿದೆ.
ಇಂಗ್ಲೀಷ್ನಲ್ಲಿ ಹೇಳಲ್ಪಟ್ಟ ಬುಡಕಟ್ಟಿನ ಭಾಷೆಗೂ, ಬುಡಕಟ್ಟು ಭಾಷೆಯಿಂದ ಇಂಗ್ಲಿಷ್ ಭಾಷೆಗೂ ಅನುವಾದಿಸುವ ತಂತ್ರಲಿಪಿ ಸಿದ್ಧಪಡಿಸುತ್ತಿದೆ. ಸದ್ಯ ಲಂಬಾಣಿ, ಸೋಲಿಗ, ಕುಯಿಗೆ ಪಠ್ಯದಿಂದ ಪಠ್ಯಕ್ಕೆ ಮಾತಿನ ಸಂಶ್ಲೇಷಣೆ ಮಾದರಿ ಅಭಿವೃದ್ಧಿಪಡಿಸಿದೆ.
ಸಾವಿರಾರು ವರ್ಷಗಳ ಇತಿಹಾಸ, ಲಿಪಿ, ಸಾಕಾಷ್ಟು ಜ್ಞಾನವಿರುವ ಬುಡಕಟ್ಟು ಜನಾಂಗದಲ್ಲಿ ಈ ತಂತ್ರಜ್ಞಾನ ಉಪಯೋಗವಾದರೆ ಜೀವವೈವಿಧ್ಯತೆ, ಪ್ರಾಣಿಗಳ ಜ್ಞಾನ, ಸಂಗೀತ, ನೃತ್ಯ, ಕಲೆ, ಪರಂಪರೆ, ಸಂಸ್ಕೃತಿ ಡಿಜಿಟಲ್ ರೂಪದಲ್ಲಿ ಹಿಡಿದಿಟ್ಟುಕೊಂಡು ಹೊರ ಜಗತ್ತಿಗೆ ಗೊತ್ತಾಗಲಿದೆ.
ಧಾರವಾಡದ ಹೈದ್ರಾಬಾದ್ ಹಾಗೂ ಭೂವನೇಶ್ವರ ಐಐಟಿ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಈ ಸಂಶೋಧನೆಯಲ್ಲಿ ಸಹಪರೀಕ್ಷಕ ಡಾ.ಪ್ರಕಾಶ ಪವಾರ ಹಾಗೂ ಡಾ.ಸಿಬಾ ಶಂಕರಪಾಡಿ ತೊಡಗಿಸಿಕೊಂಡಿದ್ದಾರೆ. ನವದೆಹಲಿಯ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಾಥಮಿಕ ಹಂತವಾಗಿ ರೂ.44.53 ಲಕ್ಷ ಅನುದಾನ ಸಹ ನೀಡಿದೆ.
ಮಾನವರೂಪಿ ರೋಬೋಟ್:
ವಯಸ್ಸಾದ ಹಿರಿಯರ ಸೇವೆಗೆ ಅನುಕೂಲವಾಗಲು ಸ್ವಯಂಚಾಲಿತ ಮಾನವರೂಪಿ ರೋಬೋಟ್ನ್ನು ಸಹ ಐಐಐಟಿ ನಿರ್ಮಿಸುತ್ತಿದೆ. ಪ್ರಸ್ತುತ ಸಂಶೊಧನಾ ಯೋಜನೆಯು ಭಾರತದ ವಾತಾವರಣಕ್ಕೆ ಒಗ್ಗುವಂತಹ, ವಯಸ್ಸಾದವರ ಆರೈಕೆಗಾಗಿ ಮಾನವರೂಪಿ ರೋಬೋಟ್ ತಯಾರಿಸಿದೆ.
ಹಾರ್ಡ್ವೇರ್- ಸಾಫ್ಟ್ವೇರ್ ಮಾರ್ಪಾಡು ಮಾಡುವುದರಿಂದ ಇತರ ಉಪಯೋಗಕ್ಕೆ ಬಳಸಬಹುದು. ನಿಯೋಜಿಸಿದ ರೋಬೋಟ್ ನಿಯಮಿತ ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿರುತ್ತದೆ.
ಅಲ್ಲದೆ ಮಾನಸಿಕ ಸೌಖ್ಯಕ್ಕಾಗಿ ಬಹುವಿಧಗಳಿಂದ ಸಂವಹಿಸುವ ಶಕ್ತಿಯನ್ನು ಹೊಂದಿರುತ್ತದೆ. ಇಂತಹ ರೋಬೋಟ್ ಅಲ್ಪ ಸಮಯದಲ್ಲಿ ತಯಾರಿಸುವುದು ಕಷ್ಟದ ಸಂಗತಿ ಎಂಬುದು ಡಾ.ಕೆ.ಟಿ.ದೀಪಕ್ ಅಭಿಮತ.
ಹೈದರಾಬಾದ್ ತಿಹಾನ್ ಐಐಟಿ ಏಜೆನ್ಸಿ ಮೂಲಕ ರೂ.70 ಲಕ್ಷಗಳ ಅನುದಾನದದಲ್ಲಿ ಸ್ವಯಂಚಾಲಿತ ಮಾನವರೂಪಿ ರೋಬೋಟ್ ತಯಾರಿಸುತ್ತಿದೆ. ಈ ಸಂಶೋಧನೆಯಲ್ಲಿ ಸಹಪರೀಕ್ಷಕರಾದ ಪ್ರೊ.ಕವಿ ಮಹೇಶ್, ಡಾ.ರಾಜೇಂದ್ರ ಹೆಗಡಿ, ಡಾ.ಪವನ್ ಕುಮಾರ್ ಸಿ, ಡಾ.ರಮೇಶ ಆತೆ, ಡಾ.ಚಿನ್ಮಯಾನಂದ ಎ. ತೊಡಗಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!