ಉಕ್ರೇನ್‌ನಿಂದ ಸ್ವಾಧೀನಪಡಿಸಿಕೊಂಡ 4 ಭಾಗಗಳನ್ನು ದೇಶದೊಳಗೆ ವಿಲೀನಗೊಳಿಸಲು ಮುಂದಾದ ರಷ್ಯಾ 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕ ಮತ್ತು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ತೀವ್ರ ವಿರೋಧದ ನಡುವೆಯೇ, ಉಕ್ರೇನ್‌ನಲ್ಲಿ ತಾನು ಸ್ವಾಧೀನಪಡಿಸಿಕೊಂಡ 4 ಭಾಗಗಳಲ್ಲಿ ನಡೆಸಿದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ರಷ್ಯಾದೊಂದಿಗೆ ವೀಲೀನಗೊಳ್ಳಲು ಅಲ್ಲಿನ ನಿವಾಸಿಗಳಿಂದ ದೊಡ್ಡ ಪ್ರಮಾಣದ ಬೆಂಬಲ ವ್ಯಕ್ತವಾಗಿದೆ ಎಂದು ರಷ್ಯಾ ಹೇಳಿದೆ.
ಉಕ್ರೇನ್‌ನ ಎಲ್ಲಾ ನಾಲ್ಕು ಆಕ್ರಮಿತ ಪ್ರದೇಶಗಳ ಜನರು ರಷ್ಯಾಕ್ಕೆ ಸೇರಲು ಮತ ಚಲಾಯಿಸಿದ್ದಾರೆ ಎಂದು ಮಾಸ್ಕೋ ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾ-ಸ್ಥಾಪಿತ ಚುನಾವಣಾ ಅಧಿಕಾರಿಗಳ ಪ್ರಕಾರ, ಝಪೋರಿಝಿಯಾ ಪ್ರದೇಶದಲ್ಲಿ 93% ಮತದಾರರು ಸ್ವಾಧೀನಪಡಿಸುವಿಕೆಯನ್ನು ಬೆಂಬಲಿಸಿದ್ದಾರೆ. ಖೇರ್ಸನ್ ಪ್ರದೇಶದಲ್ಲಿ 87%, ಲುಹಾನ್ಸ್ಕ್ ಪ್ರದೇಶದಲ್ಲಿ 98% ಮತ್ತು ಡೊನೆಟ್ಸ್ಕಾ ಭಾಗದಲ್ಲಿ 99%. ಜನರು ರಷ್ಯಾದೊಂದಿಗೆ ಸೇರಲು ಬಯಸಿದ್ದಾರೆ ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾರೆ.
ಖೆರ್ಸನ್‌ನಲ್ಲಿನ ಕಡಿಮೆ ಮತ ಬಿದ್ದಿದ್ದಕ್ಕೆ ಕಾರಣವೆಂದರೆ, ಅಲ್ಲಿ ರಷ್ಯಾದ ಅಧಿಕಾರಿಗಳು ಪ್ರಬಲವಾದ ಉಕ್ರೇನಿಯನ್ ಭೂಗತ ಪ್ರತಿರೋಧ ಚಳುವಳಿಯನ್ನು ಎದುರಿಸುತ್ತಿದ್ದಾರೆ, ಅದರ ಸದಸ್ಯರು ಮಾಸ್ಕೋ ನೇಮಿಸಿದ ಅಧಿಕಾರಿಗಳನ್ನು ಕೊಂದಿದ್ದಾರೆ ಮತ್ತು ಮತದಾನದಲ್ಲಿ ಭಾಗಿಯಾದವರಿಗೆ ಬೆದರಿಕೆ ಹಾಕಿದ್ದಾರೆ ಎಂದು ರಷ್ಯಾ ಆರೋಪಿಸಿದೆ.
ಈ ಜನಮತಗಣನೆ ನ್ಯಾಯಸಮ್ಮತವಲ್ಲ ಎಂದು ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ತಳ್ಳಿಹಾಕಿವೆ.
“ಆಧುನಿಕ ಜಗತ್ತಿನಲ್ಲಿ ಯಾವುದೇ ರಾಷ್ಟ್ರದ ಸ್ವಾಧೀನತೆಯು ಅಪರಾಧವಾಗಿದೆ, ಗಡಿಯ ಉಲ್ಲಂಘನೆಯನ್ನು ತಮ್ಮ ಆಯ್ಕೆಯನ್ನಾಗಿ ಪರಿಗಣಿಸಿರುವ ರಾಷ್ಟ್ರಗಳು ಎಸಗುತ್ತಿರುವ ಅಪರಾಧವಾಗಿದೆ” ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮರ್ ಝೆಲೆನ್ಸ್ಕಿ‌ ಹೇಳಿದ್ದಾರೆ.
ರಷ್ಯಾ ಆಕ್ರಮಿತ ದಕ್ಷಿಣ ಮತ್ತು ಪೂರ್ವ ಉಕ್ರೇನ್ ನ ನಾಲ್ಕು ಪ್ರದೇಶಗಳನ್ನು ರಷ್ಯಾಕ್ಕೆ ಸೇರಿಸಬೇಕೆಂದು ಅಲ್ಲಿನ ನಿವಾಸಿಗಳನ್ನು ಕೇಳುವ ಜನಾಭಿಪ್ರಾಯ ಸಂಗ್ರಹವು ಸೆಪ್ಟೆಂಬರ್ 23 ರಂದು ಪ್ರಾರಂಭವಾಗಿ ಮಂಗಳವಾರ (27) ರಂದು ಮುಗಿದಿದೆ. ಶಸ್ತ್ರಸಜ್ಜಿತ ಅಧಿಕಾರಿಗಳು ಮನೆ-ಮನೆಗೆ ತೆರಳಿ ಮತಗಳನ್ನು ಸಂಗ್ರಹಿಸಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಕ್ರವಾರ ಜನಾಭಿಪ್ರಾಯ ಸಂಗ್ರಹಣೆಗಳ ಬಗ್ಗೆ ರಷ್ಯಾದ ಸಂಸತ್ತಿನಲ್ಲಿ ಮಾತನಾಡುವ ನಿರೀಕ್ಷೆಯಿದೆ ಮತ್ತು ಅಕ್ಟೋಬರ್ 4 ರಂದು ಸ್ವಾಧೀನಪಡಿಸಿಕೊಂಡ ಪ್ರದೇಶಗಳು ಅಧಿಕೃತವಾಗಿ ರಷ್ಯಾ ಸೇರ್ಪಡೆಗೊಳಿಸುತ್ತಿರುವ ಶಾಸನವನ್ನು ಹೊರಡಿಸುವ ಸಾಧ್ಯತೆಗಳಿವೆ ಎಂದು ದೇಶದ ಮೇಲ್ಮನೆಯ ಅಧ್ಯಕ್ಷರಾದ ವ್ಯಾಲೆಂಟಿನಾ ಮ್ಯಾಟ್ವಿಯೆಂಕೊ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!