ಅಂತರಾಷ್ಟ್ರೀಯ ಸಂಬಂಧಗಳಲ್ಲಿ ವೋಟ್‌ ಬ್ಯಾಂಕ್‌ ರಾಜಕಾರಣ ಸರಿಯಲ್ಲ : ಅಮೆರಿಕದ ವರದಿಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವೋಟ್‌ ಬ್ಯಾಂಕ್‌ ರಾಜಕೀಯವನ್ನು ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಅಳವಡಿಸುವುದು ವಿಷಾದನೀಯ ಸಂಗತಿ ಎಂದು ಭಾರತದ ವಿದೇಶಾಂಗ ಸಚಿವಾಲಯ ಅಮೆರಿಕದ ವರದಿಗೆ ತಿರುಗೇಟು ನೀಡಿದೆ.

ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳಾಗುತ್ತಿವೆ ಎಂದು ಅಮೆರಿಕದ ವರದಿಯು ಹೇಳಿತ್ತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವವಾಲಯ ಇದು ಅಸಮರ್ಪಕ ಮತ್ತು ಅಪ್ರಬುದ್ಧವಾದದ್ದು ಎಂದು ಹೇಳಿದೆ.

ಅಮೆರಿಕ ಬಿಡುಗಡೆ ಮಾಡಿರುವ 2021ರ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವರದಿಯು, ಭಾರತದಲ್ಲಿ ಹತ್ಯೆಗಳು, ಹಲ್ಲೆಗಳು ಮತ್ತು ಬೆದರಿಕೆ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಗಳು ವರ್ಷವಿಡೀ ಮುಂದುವರೆದಿದೆ ಎಂದು ಆರೋಪಿಸಿದೆ.

ಇದರ ಕುರಿತು ಭಾರತದ ಪರವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ “ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕದ ಹಿರಿಯ ಅಧಿಕಾರಿಗಳೇ ಅಪ್ರಬುದ್ಧವಾಗಿ ವರದಿ ಮಾಡಿರುವುದನ್ನು ನಾವು ಗಮನಿಸಿದ್ದೇವೆ. ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಈ ರೀತಿಯ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುವುದು ವಿಷಾದನೀಯ ಸಂಗತಿ . ಈ ರೀತಿಯ ಪಕ್ಷಪಾತದ ಆಧಾರದ ಮೇಲೆ ಮೌಲ್ಯಮಾಪನ ಮಾಡುವುದು ಸರಿಯಾದುದಲ್ಲ” ಎಂದಿದ್ದಾರೆ.

ಹಿಂದೆಯೂ ಕೂಡ ಈ ವರದಿಯನ್ನು ತಿರಸ್ಕರಿಸಿದ ಭಾರತ ತನ್ನ ನಾಗರಿಕರ ಸಂವಿಧಾನಾತ್ಮಕ ಹಕ್ಕುಗಳ ಕುರಿತು ಮಾತನಾಡಲು ವಿದೇಶಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!