ಹೊಸದಿಗಂತ ವರದಿ, ವಿಜಯನಗರ:
ವಕ್ಫ್ ಕಾನೂನು ತಿದ್ದುಪಡಿ ಎಂಬುದು ಕಾಂಗ್ರೆಸ್ ಸರ್ಕಾರದ ಪಾಪದ ಕೂಸು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಸಹಾಯಕತೆ ಸಿಲುಕಿಸಿದೆ ಎಂದು ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಹೊಸಪೇಟೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸತಿ ಹಾಗೂ ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ರಾಜ್ಯಾದ್ಯಂತ ಜಿಲ್ಲಾ ವಕ್ಫ್ ಅದಾಲತ್ ನಡೆಸಿದ್ದಾರೆ. ಆಗ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳಿಗೆ ಒತ್ತಡ ಹಾಕಿ ತಮಗೆ ಬೇಕಾದ ಆಸ್ತಿಯನ್ನು ವಕ್ಫ್ಗೆ ಆಸ್ತಿ ಎಂದು ದಾಖಲೆಗಳಲ್ಲಿ ನಮೂದಿಸಿದ್ದಾರೆ. ಆನಂತರ ರೈತರು ಮತ್ತಿತರರಿಗೆ ವಕ್ಫ್ ನೋಟಿಸ್ ಬಂದಿದೆ. ರೈತರಿಗೆ ವಕ್ಫ್ ನೀಡಿರುವ ನೋಟಿಸ್‌ಗಳು ಹಿಂಪಡೆಯಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರೂ, ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದರು.
ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ೨೦೧೩ರಲ್ಲಿ ಕಾಂಗ್ರೆಸ್ ಸರ್ಕಾರ ವಕ್ಫ್ ಕಾನೂನಿಗೆ ತಿದ್ದುಪಡಿ ತಂದಿದೆ. ವಕ್ಫ್ ಟ್ರಿಬ್ಯೂನಲ್ ರಚನೆ ಮಾಡಿದ್ದೇ, ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಬಳ್ಳಾರಿ- ವಿಜಯನಗರ ಅವಳಿ ಜಿಲ್ಲೆಯ ೩ ಸಾವಿರ ಸೇರಿದಂತೆ ರಾಜ್ಯದಲ್ಲಿ ಸುಮಾರು ೬೫ ಸಾವಿರ ಆಸ್ತಿಗಳಿವೆ. ಈ ಕುರಿತು ಜಂಟಿ ಸದನ ಸಮಿತಿ ಅಧ್ಯಕ್ಷರ ಪ್ರವಾಸ ನಡೆಸಿ, ಪರಿಶೀಲಿಸಿದ್ದಾರೆ. ಅವರ ಪೂರ್ಣ ವರದಿಗಾಗಿ ಕಾಯುತ್ತಿದ್ದೇವೆ ಎಂದರು.
ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಸದಸ್ಯ ತಾರಿಹಳ್ಳಿ ಜಂಬುನಾಥ, ಜಗದೀಶ್ ಕಮಟಿಗಿ, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ ಶ್ರೀನಾಥ್, ಬಿ.ಎಸ್.ಜಂಬಯ್ಯ ನಾಯಕ, ದ್ವಾರಕೇಶ್ ಇತರರು ಇದ್ದರು.