ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ವಕ್ಫ್ ಮಸೂದೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ವಕ್ಫ್ ಬಿಲ್ ಮುಸ್ಲಿಂ ವಿರೋಧಿಯಲ್ಲ. ಆದರೆ ವಿರೋಧ ಪಕ್ಷದ ನಾಯಕರು, ಮಸೂದೆಯ ಬಗ್ಗೆ ತಪ್ಪು ಕಲ್ಪನೆಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಸ್ಲಾಮೇತರ ಸದಸ್ಯರನ್ನು ವಕ್ಫ್ ಮಂಡಳಿಗೆ ನೇಮಿಸಲಾಗುತ್ತದೆ ಎಂದು ವಿಪಕ್ಷಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಧಾರ್ಮಿಕ ಸಂಸ್ಥೆಯನ್ನು ನಿರ್ವಹಿಸಲು ಮುಸ್ಲಿಮೇತರರನ್ನು ನೇಮಕ ಮಾಡುವುದಿಲ್ಲ. ಅಂತಹ ಯಾವುದೇ ನಿಬಂಧನೆಯನ್ನು ಪರಿಚಯಿಸುವ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
1913 ರಿಂದ 2013 ರವರೆಗೆ ವಕ್ಫ್ ಮಂಡಳಿಯ ಅಡಿಯಲ್ಲಿ 18 ಲಕ್ಷ ಎಕರೆ ಭೂಮಿ ಇತ್ತು, ಆದರೆ 2013-2025 ರವರೆಗೆ ಹೆಚ್ಚುವರಿಯಾಗಿ 21 ಲಕ್ಷ ಎಕರೆ ಭೂಮಿಯನ್ನು ಸೇರಿಸಲಾಗಿದೆ. ವಿರೋಧ ಪಕ್ಷಗಳು ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿವೆ . ಆದರೆ ವಕ್ಫ್ ದಾನವನ್ನು ಒಬ್ಬರ ಸ್ವಂತ ಆಸ್ತಿಯಿಂದ ಮಾಡಬಹುದೇ ವಿನಃ, ಆದಕ್ಕೆ ಬೇರೆಯವರ ಆಸ್ತಿಯನ್ನು ಬಳಸುವಂತಿಲ್ಲ. ಯಾಕೆಂದರೆ, ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಅನುಸರಿಸುವ ಹಕ್ಕಿದೆ ಎಂದರು.
2013ರಲ್ಲಿ ವಕ್ಫ್‌ಗೆ ತಿದ್ದುಪಡಿಗಳನ್ನು ಪರಿಚಯಿಸಿದಾಗ, ಲಾಲು ಪ್ರಸಾದ್ ಯಾದವ್ ಅವರು ದುರುಪಯೋಗ ತಡೆಯಲು ಕಠಿಣ ಕಾನೂನು ಬೇಕು ಮತ್ತು ಅತಿಕ್ರಮಣ ಮಾಡುವವರನ್ನು ಜೈಲಿಗೆ ಹಾಕಬೇಕೆಂದು ಹೇಳಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಲಾಲು ಪ್ರಸಾದ್ ಯಾದವ್ ಅವರ ಆಶಯಗಳನ್ನು ಪೂರೈಸಿದ್ದಾರೆ ಎಂದು ಹೇಳಿದರು.
ಹಲವಾರು ಪ್ರಕರಣಗಳು ಮತ್ತು ನಿದರ್ಶನಗಳನ್ನು ಪಟ್ಟಿ ಮಾಡಿದ ಶಾ, ಕರ್ನಾಟಕದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಕರ್ನಾಟಕ ಹೈಕೋರ್ಟ್ 602 ಚದರ ಕಿ.ಮೀ. ಪ್ರದೇಶವನ್ನು ವಕ್ಫ್ ವಶಪಡಿಸಿಕೊಳ್ಳುವುದನ್ನು ತಡೆದಿದೆ ಎಂದು ವಿವರಿಸಿದರು. ದಿಲ್ಲಿಯ ಲುಟ್ಯೆನ್ಸ್ ವಲಯದಲ್ಲಿನ ಆಸ್ತಿಗಳು ವಕ್ಫ್ ಪಾಲಾದವು. ಜತೆಗೆ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಲಾಯಿತು. ತಮಿಳುನಾಡಿನಲ್ಲಿ 400 ವರ್ಷಗಳಷ್ಟು ಹಳೆಯದಾದ ದೇವಾಲಯದ ಆಸ್ತಿಯನ್ನು ವಕ್ಫ್ ಎಂದು ಘೋಷಿಸಲಾಯಿತು. ಪಂಚತಾರಾ ಹೋಟೆಲ್ ಸ್ಥಾಪಿಸಲು ಭೂಮಿಯನ್ನು ತಿಂಗಳಿಗೆ 12,000 ರೂ.ಗೆ ವಕ್ಫ್‌ಗೆ ನೀಡಲಾಯಿತು. ಪ್ರಯಾಗ್‌ರಾಜ್‌ನಲ್ಲಿರುವ ಚಂದ್ರಶೇಖರ್ ಆಜಾದ್ ಪಾರ್ಕ್ ಸೇರಿದಂತೆ ವಿವಿಧ ಧರ್ಮಗಳಿಗೆ ಸೇರಿದ ಹಲವಾರು ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸಲಾಯಿತು ಎಂದು ಅವರು ಹೇಳಿದರು.
ಈ ಮಸೂದೆಯು ಎಎಸ್‌ಐ ಆಸ್ತಿ, ಬುಡಕಟ್ಟು ಸಮುದಾಯಕ್ಕೆ ಸೇರಿದ ಭೂಮಿ ಮುಂತಾದ ಆಸ್ತಿಯನ್ನು ರಕ್ಷಿಸುತ್ತದೆ. ನೀವು ಖಾಸಗಿ, ವೈಯಕ್ತಿಕ ಆಸ್ತಿಯನ್ನು ಮಾತ್ರ ವಕ್ಫ್‌ಗೆ ದಾನ ಮಾಡಬಹುದು ಮತ್ತು ಸಮುದಾಯದ (ಗ್ರಾಮ) ಭೂಮಿಯನ್ನು ನೀಡಲು ಆಗುವುದಿಲ್ಲ. ಈ ಮಸೂದೆಯು ಪಾರದರ್ಶಕತೆಯನ್ನು ತರುತ್ತದೆ ಎಂದು ವಿವರಿಸಿದರು.