ಹೊಸ ದಿಗಂತ ವರದಿ, ಚಿತ್ರದುರ್ಗ:
ಗಾಂಧಿ ವೃತ್ತದ ಸಮೀಪವಿರುವ ಹೈದರ್ಷಾವಲಿ ದರ್ಗಾ ಸಮಿತಿಗೆ ಸೇರಿದ ಕಾಂಪ್ಲೆಕ್ಸ್ನಲ್ಲಿ ಬಾಡಿಗೆ ಪಾವತಿಸದ ಎಂಟು ಮಳಿಗೆಗಳಿಗೆ ಕಳೆದ 17 ರಂದು ದರ್ಗಾ ಸಮಿತಿ ಹಾಗೂ ಜಿಲ್ಲಾ ವಕ್ಫ್ ಮಂಡಳಿ ಅಧಿಕಾರಿಯ ಸಮ್ಮುಖದಲ್ಲಿ ಸೀಲ್ ಮಾಡಲಾಗಿತ್ತು. ಇದೇ ದ್ವೇಷ ಇಟ್ಟುಕೊಂಡು ಐದು ಮಂದಿ ಸೀಲ್ ಮಾಡಿದ್ದ ಬೀಗವನ್ನು ಸೋಮವಾರ ಸಂಜೆ ಕಬ್ಬಿಣದ ರಾಡಿನಿಂದ ಹೊಡೆದಿದ್ದು, ಈ ಸಂಬಂಧ ಕೋಟೆ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಲಾಗಿದೆ.
ನೂರ್ ಅಹಮದ್, ತಬ್ರೇಜ್, ಪಾಜಿಲ್ ಅಹಮದ್, ದಾದಾಪೀರ್, ಮಹಬೂಬ್ ಇವರುಗಳು ಮಳಿಗೆಗೆ ಸೀಲ್ ಮಾಡಿದ್ದ ಬೀಗವನ್ನು ಕಬ್ಬಿಣದ ರಾಡಿನಿಂದ ಹೊಡೆಯುತ್ತಿದ್ದಾಗ ಪ್ರಶ್ನಿಸಲು ಹೋದ ಹೈದರ್ಷಾವಲಿ ದರ್ಗಾ ಸಮಿತಿಯ ಸಿಬ್ಬಂದಿಗಳಾದ ಟಿಪ್ಪುಸುಲ್ತಾನ್, ಹಯಾತ್ಖಾನ್ ಮೇಲೆ ರಾಡಿನಿಂದ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ತಪ್ಪಿತಸ್ಥರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಹೈದರ್ಷಾವಲಿ ಸಮಿತಿಯವರು ದೂರು ನೀಡಿದ್ದರ ಮೇರೆಗೆ ಕೋಟೆ ಠಾಣೆ ಇನ್ಸ್ಪೆಕ್ಟರ್ ತಮ್ಮ ಸಿಬ್ಬಂದಿಯೊಂದಿಗೆ ಹೈದರ್ಷಾವಲಿ ದರ್ಗಾ ಸಮಿತಿಯ ಕಾಂಪ್ಲೆಕ್ಸ್ಗೆ ಭೇಟಿ ನೀಡಿ ಬೀಗ ಹೊಡೆದಿರುವುದನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಹೈದರ್ಷಾವಲಿ ದರ್ಗಾ ಸಮಿತಿಯ ಅಧ್ಯಕ್ಷ ಎಂ.ಹನೀಫ್, ಕಾರ್ಯದರ್ಶಿ ನಯಾಜ್, ಖಜಾಂಚಿ ಹನೀಸ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು. ಹಲ್ಲೆಗೊಳಗಾಗಿರುವ ಟಿಪ್ಪುಸುಲ್ತಾನ್ನನ್ನು ಬೆಂಗಳೂರು ಹಾಗೂ ಹಯಾತ್ಖಾನ್ನನ್ನು ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.